ಮಡಿಕೇರಿ, ಜೂ, ೨೬: ನೆಲಜಿಯಲ್ಲಿರುವ ಮಲ್ಮ ಬೆಟ್ಟದ ಸಮೀಪದಲ್ಲಿರುವ ತಮ್ಮ ಜಾಗದಲ್ಲಿ ಯಾವುದೇ ಕಾಮಗಾರಿಗಳನ್ನು ಮಾಡುವ ನಿರ್ಧಾರವನ್ನು ಕೈ ಬಿಡಲಾಗಿದ್ದು, ಈ ಜಾಗವನ್ನು ಆಸಕ್ತರು ಖರೀದಿಸುವಂತೆ ಜಾಗದ ಮಾಲೀಕ ಶ್ರೀ ಎಂ ಖ್ಯಾತಿಯ ಮಧುಕರ್‌ನಾಥ್ (ಮುಮ್‌ತಾಜ್ ಅಲಿ) ಅವರು ಇಂದು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನೆಲಜಿಯ ಮಲ್ಮ ಬೆಟ್ಟದ ಜಾಗವನ್ನು ಖರೀದಿಸಿದ್ದ ಶ್ರೀ ಎಂ ಅವರು ಆ ಜಾಗಕ್ಕೆ ರಸ್ತೆ ಸಂಪರ್ಕ ಸಂಬAಧ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಬೆನ್ನಲ್ಲೇ ಹಾಗೂ ಆ ಜಾಗದ ಕೆಲ ಭಾಗವನ್ನು ವಾಣಿಜ್ಯ ಎಂದು ಪರಿವರ್ತನೆ ಮಾಡಲು ಅನುಮತಿ ಕೋರಿದ್ದರಿಂದ ಇತ್ತೀಚೆಗೆ ಸ್ಥಳೀಯರಿಂದ ತೀವ್ರ ವಿರೋಧ ಉಂಟಾಯಿತು. ಈ ಜಾಗವು ಸ್ಥಳೀಯರಿಗೆ ಪವಿತ್ರವಾದ ಜಾಗವಾಗಿದ್ದು, ಇಲ್ಲಿ ಯಾವ ರೀತಿಯ ಕಾಮಗಾರಿಗಳೂ ನಡೆಸದಂತೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲೆಯಾದ್ಯಂತ ಹಾಗೂ ರಾಷ್ಟçದಾದ್ಯಂತಲೂ ಈ ವಿಷಯ ಚರ್ಚೆಗೆ ಗ್ರಾಸವಾಗಿತ್ತು. ಈ ಕಾರಣದಿಂದಾಗಿ, ತಾವು ಖರೀದಿಸಿದ್ದ ಜಾಗದಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ನಡೆಸದಿರಲು ಶ್ರೀ ಎಂ ನಿಶ್ಚಯಿಸಿದ್ದು, ಈ ಸಂಬAಧ ಪತ್ರಿಕಾ ಹೇಳಿಯನ್ನು ಕೂಡ ನೀಡಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿ ಮತ್ತೇ ಅದೇ ನಿರ್ಧಾರವನ್ನು ಪ್ರತಿಪಾದಿಸಿದರು.

ಆ ಜಾಗ ತಮಗೆ ಬೇಡ, ಆ ಜಾಗವನ್ನು ಯಾರಾದರೂ ಖರೀದಿಸಲು ಮುಂದಾದರೆ ಅವರಿಗೆ ಮಾರಾಟ ಮಾಡುತ್ತೇನೆ. ಯಾರೂ ಬರದಿದ್ದಲ್ಲಿ ಅರಣ್ಯ ಇಲಾಖೆಗೆ ನೀಡುತ್ತೇನೆ. ಆ ಜಾಗದ ಹತ್ತಿರವೂ ತಾವು ತೆರಳುವುದಿಲ್ಲ ಎಂಬುದಾಗಿಯೂ ಈ ಸಂದರ್ಭ ಶ್ರೀ ಎಂ ಹೇಳಿದರು.

“ಗೋಶಾಲೆ-ಧ್ಯಾನ ಕೇಂದ್ರ ಮಾಡುವ ಉದ್ದೇಶವಿತ್ತು”

ತಾವು ಧಾರ್ಮಿಕ ಸೌಹಾರ್ದತೆಯನ್ನು ಪ್ರೋತ್ಸಾಹಿಸುವವರಾಗಿದ್ದು, ಸಂಸ್ಕೃತದಲ್ಲಿ ಪರಿಣಿತರು ಕೂಡ ಹೌದು. ಉಪನಿಷದ್ ಶಿಕ್ಷಣ ತರಬೇತಿ ಕೂಡ ನೀಡುತ್ತಿದ್ದು, ಭಗವದ್ಗೀತಾ ಅನುವಾದವನ್ನು ಕೂಡ ಮಾಡಿದ್ದಾಗಿ ಶ್ರೀ ಎಂ ಹೇಳಿದರು. ಮಲ್ಮ ಬೆಟ್ಟದ ಸಮೀಪ ತಾವು ಖರೀದಿಸಿದ್ದ ಜಾಗದಲ್ಲಿ ಗೋಶಾಲೆ ಹಾಗೂ ಧ್ಯಾನ ಕೇಂದ್ರ ಮಾಡುವ ಉದ್ದೇಶವಿತ್ತು ಎಂದ ಶ್ರೀ ಎಂ, ಸಂಸ್ಕೃತ ತರಬೇತಿ ನೀಡುವ ಯೋಜನೆಯನ್ನೂ ರೂಪಿಸಲಾಗಿದ್ದು, ಇದಕ್ಕೆಲ್ಲ ಕಾಟೇಜ್ ನಿರ್ಮಿಸುವುದು ಅಗತ್ಯವಿತ್ತು. ಇದರೊಂದಿಗೆ ಗೋಶಾಲೆ ನಿರ್ಮಾಣವನ್ನು ಮಾಡುವ ಉದ್ದೇಶವಿತ್ತು. ಕಾನೂನು ಪ್ರಕಾರ ಇದಕ್ಕೆಲ್ಲ ವಾಣಿಜ್ಯ ಪರಿವರ್ತನೆ ಅಗತ್ಯವಿದ್ದ ಕಾರಣ ಒಟ್ಟು ೫೯ ಎಕರೆ ೯೦ ಸೆಂಟ್ ವ್ಯಾಪ್ತಿಯಲ್ಲಿ ೧೦ ಎಕರೆ ಜಾಗವನ್ನು ಪರಿವರ್ತಿಸಲು ಮನವಿ ಕೋರಿದ್ದೆ. ನಂತರ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾದ ಕಾರಣ ಯಾವುದೇ ರೀತಿಯ ಕಾಮಗಾರಿ ನಡೆಸಿಲ್ಲ ಎಂದರು. ಜಾಗದ ಪರಿವರ್ತನೆಯೂ ಆಗಿಲ್ಲ ಎಂದು ಕೂಡ ಈ ಸಂದರ್ಭ ಮಾಹಿತಿ ನೀಡಿದರು.

ಜಾಗದಲ್ಲಿ ಕೆರೆಯನ್ನು ನಿರ್ಮಿಸಲು ಅಲ್ಪ ಪ್ರಮಾಣದಲ್ಲಿ ಪೊದೆ ಕಡಿಯಲಾಗಿತ್ತು. ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು ಇದೀಗ ನಿಲ್ಲಿಸಲಾಗಿದೆ. ಯಾವುದೇ ರೀತಿಯ ಕಟ್ಟಡ ನಿರ್ಮಾಣವಾಗಿಲ್ಲ ಎಂದು ಅವರು ಹೇಳಿದರು.

ರೂ.೬.೨೫ ಕೋಟಿ ಬೆಲೆಯ ೫೯ ಎಕರೆ ಜಾಗ

ಈ ವರ್ಷದ ಏಪ್ರಿಲ್‌ನಲ್ಲಿ ರೂ.೬.೨೫ ಕೋಟಿ ವೆಚ್ಚದಲ್ಲಿ ೫೯ ಎಕರೆ ಜಾಗವನ್ನು ಚೀಯಕಪೂವಂಡ ಪಿ ತಮ್ಮಯ್ಯ ಅವರ ಹೆಸರಿನಲ್ಲಿದ್ದ ಜಾಗವನ್ನು ಹಾಗೂ ಫೆಬ್ರವರಿಯಲ್ಲಿ ಅದೇ ಜಾಗದ ಸಮೀಪ ರಸ್ತೆಯ ಮತ್ತೊಂದು ಬದಿಯಲ್ಲಿರುವ ಮುಕ್ಕಾಟಿರ ಎಮ್. ಜಯ ಅವರಿಗೆ ಸೇರಿದ್ದ ೧೨ ಎಕರೆ ಜಾಗದ ಕಾಫಿ ತೋಟವನ್ನು ಖರೀದಿಸಲಾಗಿತ್ತು. ಈ ಬಗ್ಗೆ ಎಸ್.ಪಿ ಹಾಗೂ ಡಿ.ಸಿಗೆ ಸಂಪೂರ್ಣ ದಾಖಲಾತಿಗಳ ಮಾಹಿತಿ ನೀಡಿರುವುದಾಗಿ ಶ್ರೀ ಎಂ ಹೇಳಿದರು.

ಕಳೆದ ೩೦ ವರ್ಷಗಳಿಂದ ೫೯ ಎಕರೆ ಜಾಗವು ಬಹುತೇಕ ಪಾಳು ಬಿದ್ದ ರೀತಿಯಲ್ಲಿದ್ದ ಕಾರಣ ಅಲ್ಲಿ ಧ್ಯಾನ ಕೇಂದ್ರ, ಗೋಶಾಲೆ ನಿರ್ಮಿಸುವ ಉದ್ದೇಶವಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿ ಪಳ್ಳಿ ಕಟ್ಟುವ ಉದ್ದೇಶವಿದೆ ಎಂದು ತಪ್ಪು ಸಂದೇಶ ರವಾನಾಗಿತ್ತು. ನಾನು ಕೇವಲ ದೇವಸ್ಥಾನಗಳನ್ನು ಮಾತ್ರ ನಿರ್ಮಿಸುವವನಾಗಿದ್ದೇನೆ ಎಂದು ಪ್ರತಿಪಾದಿಸಿದರು. ಆಂದ್ರ ಪ್ರದೇಶದಲ್ಲಿ ಸತ್‌ಸಂಗ್ ಫೌಂಡೇಷನ್ ಆಶ್ರಮ್ ಅಡಿಯಲ್ಲಿ ದೇವಸ್ಥಾನ ನಿರ್ಮಿಸಿದ್ದೇನೆ. ಅಮೇರಿಕಾದ ಟೆಕ್ಸಸ್‌ನಲ್ಲಿಯೂ ಧ್ಯಾನ ಕೇಂದ್ರ ನಿರ್ಮಿಸಿರುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಎಂ ಅನುಯಾಯಿಗಳಾದ ಬಿದ್ದಂಡ ಲಾಲ್ ಕುಶಾಲಪ್ಪ ಹಾಗೂ ಬಿದ್ದಂಡ ಬೋಪಣ್ಣ ಹಾಜರಿದ್ದರು.