ಮಡಿಕೇರಿ, ಜೂ. ೨೬: ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಹಾಗೂ ಆಕೆಯ ಮಗನನ್ನು ಮತಾಂತರ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ವ್ಯಾಪಾರ ಕೇಂದ್ರವನ್ನು ಗುರಿ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವ್ಯಾಪಾರಿಗಳು, ಈ ಕುರಿತು ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ತಕ್ಕಶಿಕ್ಷೆಯಾಗಲಿ ಎಂದು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವ್ಯಾಪಾರಿ ಮುರುಳಿ ಅಂಚೆಮನೆ, ಎನ್‌ಟಿಸಿಯಲ್ಲಿ ಹಿಂದೂಗಳು ಸೇರಿದಂತೆ ವಿವಿಧ ಧರ್ಮದವರು ವ್ಯಾಪಾರ ಚಟುವಟಿಕೆ ನಡೆಸುತ್ತಿದ್ದಾರೆ. ವಿವಿಧ ಜಾತಿ-ಧರ್ಮದವರು ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ನಡೆದ ಮತಾಂತರ ಪ್ರಕರಣದಲ್ಲಿ ಒಬ್ಬರು ಮಾಡಿದ ತಪ್ಪಿಗೆ ಇಡೀ ವ್ಯಾಪಾರ ಕೇಂದ್ರವನ್ನು ದೂಷಿಸುವುದು ಸರಿಯಲ್ಲ. ೩೦೦ ರಿಂದ ೪೦೦ ಕಾರ್ಮಿಕರು ಇಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಸೌಹಾರ್ದಯುತವಾಗಿದ್ದೇವೆ. ೨೦ ರಿಂದ ೨೫ ಅಂಗಡಿಗಳು ಹಿಂದೂಗಳಿಗೆ ಸೇರಿವೆ. ೧೫೦ಕ್ಕೂ ಹೆಚ್ಚು ಕೆಲಸಗಾರರು ಹಿಂದೂಗಳಾಗಿದ್ದಾರೆ. ಮತಾಂತರವನ್ನು ನಾವು ವಿರೋಧಿಸುತ್ತೇವೆ. ಅಲ್ಲದೆ ತಾ. ೩೦ ರಂದು ಹಿಂದೂ ಸುರಕ್ಷಾ ಸಮಿತಿ ವತಿಯಿಂದ ನಡೆಯಲಿರುವ ಹೋರಾಟಕ್ಕೆ ಬೆಂಬಲಿಸಿ ಎನ್‌ಟಿಸಿಯಲ್ಲಿರುವ ಎಲ್ಲಾ ಮಳಿಗೆಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಲಾಗುವುದು ಎಂದರು.
ಈ ಘಟನೆಯ ನಂತರ ಮಹಿಳಾ ಸಿಬ್ಬಂದಿ ಹಾಗೂ ಮಹಿಳಾ ಪೊಲೀಸರನ್ನು ಒಳಗೊಂಡ ವಾಟ್ಸಾö್ಯಪ್ ಗ್ರೂಪ್ ರಚಿಸಲಾಗಿದ್ದು, ಮಹಿಳೆಯರಿಗೆ ಸಮಸ್ಯೆಗಳಿದ್ದಲ್ಲಿ ಈ ಮೂಲಕ ತಿಳಿಸಬಹುದಾಗಿದೆ. ವ್ಯಾಪಾರ ಕೇಂದ್ರದ ವಿರುದ್ಧ ಮಾಡುತ್ತಿರುವ ಆರೋಪದಿಂದ ವಾತಾವರಣ ಬದಲಾಗಿದೆ ಎಂದು ತಿಳಿಸಿದರು.
ವ್ಯಾಪಾರಿ ಟಿ.ಕೆ. ಲೋಕೇಶ್ ಮಾತನಾಡಿ, ವ್ಯಾಪಾರ ಕೇಂದ್ರದಲ್ಲಿ ಕೇವಲ ಮುಸ್ಲಿಂ ವ್ಯಾಪಾರಿಗಳಿಲ್ಲ. ವಿವಿಧ ಧರ್ಮದವರಿದ್ದಾರೆ. ಮತಾಂತರ ಚಟುವಟಿಕೆಯನ್ನು ನಾವು ವಿರೋಧಿಸುತ್ತೇವೆ. ಆರೋಪಿಗಳಿಗೆ ತಕ್ಕಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ವ್ಯಾಪಾರಿಗಳಾದ ಪಿ.ಎಸ್. ಬಿನೇಶ್, ಗಜರಾಮ್ ಚೌದರಿ, ಹೆಚ್.ಎನ್. ಸದಾಶಿವ ಹಾಜರಿದ್ದರು.