ಕಡಂಗ, ಜೂ. ೩೦: ಕಡಂಗ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಡಂಗ ಪ್ರೀಮಿಯರ್ ಲೀಗ್ ಕೆಸರುಗದ್ದೆ ಕಾಲ್ಚೆಂಡು ಹಾಗೂ ವಾಲಿಬಾಲ್ ಕ್ರೀಡಾಕೂಟ ಅರಮೇರಿ ಗ್ರಾಮದ ಪೂಳಂಡ ಪೂವಯ್ಯ ಸಹೋದರರು ಹಾಗೂ ಪಿ.ಬಿ. ಜೋಯಪ್ಪ ಅವರ ಗದ್ದೆಯಲ್ಲಿ ನಡೆಯಿತು.

ಕ್ರೀಡಾಕೂಟದಲ್ಲಿ ಕಡಂಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ೧೫೦ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿ ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಬೈರ್ ಉದ್ಘಾಟಿಸಿದರು.

ಕೆಸರುಗದ್ದೆ ಫುಟ್ಬಾಲ್ ಪಂದ್ಯಾವಳಿಯಲ್ಲಿ ೧೨ ತಂಡಗಳು ಸ್ಪರ್ಧಿಸಿದವು. ಮೊದಲ ಸೆಮಿಫೈನಲ್‌ನಲ್ಲಿ ಗನ್ನರ್ಸ್ ತಂಡವನ್ನು ಮಣಿಸಿದ ಸಿಟಿ ಬ್ರದರ್ಸ್ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್‌ನಲ್ಲಿ ಚೆಮ್ಮಿನ್ ಎಫ್‌ಸಿ ವಿರುದ್ಧ ಜಯ ಸಾಧಿಸಿದ ಬರ್ಗೂರು ತಂಡ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ರೋಚಕ ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಯಾವುದೇ ತಂಡ ಗೋಲು ದಾಖಲಿಸದ ಕಾರಣ ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಸಾಗಿತು. ಪೆನಾಲ್ಟಿಯಲ್ಲಿ ಜೀನಾಸ್ ಗಳಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಬರ್ಗೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ವಾಲಿಬಾಲ್ ಪಂದ್ಯಾವಳಿಯಲ್ಲಿ ಎ.ಬಿ.ಆರ್. ತಂಡವನ್ನು ಸೋಲಿಸಿದ ಬಿಲಾಲ್ ಎಫ್‌ಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಆಶಿಕ್ ಉತ್ತಮ ಆಟಗಾರ, ರಾಫಿ ಉತ್ತಮ ಗೋಲ್‌ಕೀಪರ್ ಹಾಗೂ ಸಜೀರ್ (ಸಿಟಿ ಬ್ರದರ್ಸ್) ಆಕರ್ಷಕ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಅಗತ್ಯ: ಡಾಲಿ ಸುಬ್ರಮಣಿ

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಮಾಜಸೇವಕ ಕೋಡಿರ ಡಾಲಿ ಸುಬ್ರಮಣಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಇಂತಹ ಕ್ರೀಡಾಕೂಟಗಳು ಹೆಚ್ಚು ಆಯೋಜನೆಯಾಗಬೇಕು. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಇಂತಹ ಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.

ಕೆಸರುಗದ್ದೆ ಕ್ರೀಡೆಗಳು ಸ್ಪರ್ಧಾಳುಗಳಷ್ಟೇ ಅಲ್ಲದೆ ನೋಡುಗರಿಗೂ ವಿಶೇಷ ಉಲ್ಲಾಸವನ್ನು ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಇಕ್ಬಾಲ್ ಜೆಕರಿಯ, ಮುನೀರ್, ಕುನ್ನಿ ಮಹಮ್ಮದ್, ನಾಫಿ, ಲತೀಫ್ ಹಾಗೂ ಸಾಬೀರ್ ಉಪಸ್ಥಿತರಿದ್ದರು.

ಜುನೈದ್ ಕೆ.ಎಂ., ಜಾಫರ್ ಹಾಗೂ ಅಜ್ಮಲ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸಹದ್ ಎ.ಎಸ್. ಮತ್ತು ನಿಜಾಮುದ್ದೀನ್ ಸಿ.ಎಸ್. ವೀಕ್ಷಕ ವಿವರಣೆ ನೀಡಿದರು.