ಬೆಂಗಳೂರು : ವೈವಾಹಿಕ ಜೀವನಾಂಶದ ಕುರಿತಾದ ಮಹತ್ವದ ತೀರ್ಪಿನಲ್ಲಿ, ಪತಿಯು ತನ್ನ ಪತ್ನಿ ಆರ್ಥಿಕವಾಗಿ ಸ್ವತಂತ್ರಳಾಗಿದ್ದರೆ, ತನಗಿಂತ ಹೆಚ್ಚು ಸಂಪಾದಿಸಿದರೆ ಮತ್ತು ಮಕ್ಕಳ ಪಾಲನೆಯ ಜವಾಬ್ದಾರಿ ಇಲ್ಲದಿದ್ದರೆ ಆಕೆಗೆ ಜೀವನಾಂಶ ಪಾವತಿಸಲು ಒತ್ತಾಯಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ತನ್ನ ಪರಿತ್ಯಕ್ತ ಪತ್ನಿಗೆ ಮಾಸಿಕ ಜೀವನಾಂಶ ಪಾವತಿಸುವಂತೆ ನಿರ್ದೇಶಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿತು. ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಪತಿ ಯಾವಾಗಲೂ ತನ್ನ ಪತ್ನಿಯನ್ನು ಆರ್ಥಿಕವಾಗಿ ಬೆಂಬಲಿಸಲು ಬದ್ಧನಾಗಿರುತ್ತಾನೆ ಎಂಬ ಊಹೆಯ ಮೇಲೆ ಜೀವನಾಂಶವನ್ನು ನೀಡಲಾಗುವುದಿಲ್ಲ ಎಂದು ಹೇಳಿದರು.

ಈ ಪ್ರಕರಣದಲ್ಲಿ ದಂಪತಿ ೨೦೨೪ ರಲ್ಲಿ ವಿವಾಹವಾದರು ಆದರೆ ತೀವ್ರ ಭಿನ್ನಾಭಿಪ್ರಾಯದ ಕಾರಣದಿಂದ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಇದರಲ್ಲಿ ಪತಿಗೆ ಮಾಸಿಕ ರೂ ೬೦,೬೪೬ ಮಾಸಿಕ ವೇತನ ಇದ್ದರೆ ಪತ್ನಿ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟು ಮಾಸಿಕ ಆದಾಯದೊಂದಿಗೆ ಉದ್ಯೋಗದಲ್ಲಿದ್ದರು ಎಂದು ನ್ಯಾಯಾಲಯದ ದಾಖಲೆಗಳು ತೋರಿಸಿವೆ.

ಪತಿಗಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದರೂ, ಪತ್ನಿ ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಕೆಳ ನ್ಯಾಯಾಲಯವು ಪತಿಗೆ ತಿಂಗಳಿಗೆ ೨೦,೦೦೦ ಜೀವನಾಂಶವಾಗಿ ಪಾವತಿಸಲು ನಿರ್ದೇಶಿಸಿತ್ತು. ಆದೇಶವನ್ನು ಪ್ರಶ್ನಿಸಿ, ಪತಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು.

ಎರಡೂ ಕಡೆಯ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿದ ನಂತರ, ಪತ್ನಿ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದು, ಮಕ್ಕಳನ್ನು ಅಥವಾ ಯಾವುದೇ ಇತರ ಅವಲಂಬಿತರನ್ನು ಪೋಷಿಸುವ ಜವಾಬ್ದಾರಿಯನ್ನು ಹೊಂದಿಲ್ಲ ಎಂದು ಹೈಕೋರ್ಟ್ ಗಮನಿಸಿತು. ಅಂತಹ ಸಂದರ್ಭಗಳಲ್ಲಿ, ಗಣನೀಯವಾಗಿ ಕಡಿಮೆ ಗಳಿಸಿದ ಪತಿಯನ್ನು ಜೀವನಾಂಶ ಪಾವತಿಸಲು ಒತ್ತಾಯಿಸಲು ಯಾವುದೇ ಕಾನೂನು ಸಮರ್ಥನೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಜೀವನಾಂಶವು ತನ್ನನ್ನು ತಾನು ನಿರ್ವಹಿಸಲು ಸಾಧ್ಯವಾಗದ (ಮಾಜಿ)ಸಂಗಾತಿಗೆ ಆರ್ಥಿಕ ಬೆಂಬಲವನ್ನು ಒದಗಿಸಲು ಉದ್ದೇಶಿಸಲಾಗಿದೆ ಮತ್ತು ಕೇವಲ ವೈವಾಹಿಕ ಸಂಬAಧದ ಕಾರಣದಿಂದಾಗಿ ಅದನ್ನು ನೀಡಬಾರದು ಎಂದು ನ್ಯಾಯಾಲಯವು ಗಮನಿಸಿತು.

ಪತ್ನಿಯನ್ನು ಬೆಂಬಲಿಸುವುದು ಯಾವಾಗಲೂ ಗಂಡನ ಜವಾಬ್ದಾರಿ ಎಂಬ ಸಾಂಪ್ರದಾಯಿಕ ಕಲ್ಪನೆಯ ಮೇಲೆ ಮಾತ್ರ ಜೀವನಾಂಶ ನೀಡುವುದನ್ನು ನ್ಯಾಯಾಲಯಗಳು ತಪ್ಪಿಸಬೇಕು ಎಂದು ನ್ಯಾಯಮೂರ್ತಿ ಸುಮಲತಾ ಹೇಳಿದರು. ಬದಲಾಗಿ, ಇಬ್ಬರೂ ವ್ಯಕ್ತಿಗಳ ಆರ್ಥಿಕ ಸಾಮರ್ಥ್ಯ ಮತ್ತು ಸಂದರ್ಭಗಳ ಆಧಾರದ ಮೇಲೆ ಪ್ರತಿಯೊಂದು ಪ್ರಕರಣವನ್ನು ನಿರ್ಧರಿಸಬೇಕು.

ಮಹಿಳೆ ತನ್ನ ತಂದೆಯ ಮನೆಯಲ್ಲಿ ಅನುಭವಿಸುತಿದ್ದ ಜೀವನ ಮಟ್ಟಕ್ಕೆ ಸರಿಸಮಾನವಾಗಿ ವಿಚ್ಚೇದನದ ನಂತರ ಜೀವನ ಮಟ್ಟವನ್ನು ಹೊಂದಿಲ್ಲ , ಆಕೆಗೆ ಆದಾಯ ಕಡಿಮೆ ಇದೆ ಎಂದು ಸಾಬೀತುಪಡಿಸಿದಾಗ ಮಾತ್ರ ಕೆಳ ನ್ಯಾಯಾಲಯಗಳು ಮಧ್ಯಂತರ ಅಥವಾ ಶಾಶ್ವತ ಜೀವನಾಂಶವನ್ನು ನೀಡುವಂತೆ ತೀರ್ಪು ನೀಡಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶವನ್ನು ಬದಿಗಿಟ್ಟ ಹೈಕೋರ್ಟ್, ಪತ್ನಿ ಆರ್ಥಿಕವಾಗಿ ಸುರಕ್ಷಿತಳಾಗಿದ್ದರೆ, ತನ್ನ ಪತಿಗಿಂತ ಹೆಚ್ಚಿನ ಸಂಬಳವನ್ನು ಗಳಿಸುತ್ತಿದ್ದರೆ ಮತ್ತು ಯಾವುದೇ ಹೆಚ್ಚುವರಿ ಆರ್ಥಿಕ ಜವಾಬ್ದಾರಿಗಳನ್ನು ಹೊಂದಿಲ್ಲದಿದ್ದರೆ, ಪತಿಗೆ ಜೀವನಾಂಶವನ್ನು ಪಾವತಿಸಲು ನಿರ್ದೇಶಿಸುವುದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ಪುನರುಚ್ಚರಿಸಿತು.

ಜೀವನಾಂಶ ಹಕ್ಕುಗಳನ್ನು ಒಳಗೊಂಡ ವೈವಾಹಿಕ ವಿವಾದಗಳಲ್ಲಿ ಈ ತೀರ್ಪು ಪ್ರಮುಖ ಪೂರ್ವನಿದರ್ಶನವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ, ಅಂತಹ ಪರಿಹಾರವನ್ನು ಲಿಂಗ ಆಧಾರಿತ ಊಹೆಗಳ ಆಧಾರದ ಮೇಲೆ ಅಲ್ಲ, ಆರ್ಥಿಕ ಅಗತ್ಯದ ಆಧಾರದ ಮೇಲೆ ನಿರ್ಧರಿಸಬೇಕು ಎಂದು ಕೋರ್ಟಿನ ತೀರ್ಪು ಒತ್ತಿ ಹೇಳಿದೆ.

-ಕೋವರ್ ಕೊಲ್ಲಿ ಇಂದ್ರೇಶ್