ವೀರಾಜಪೇಟೆ, ಜೂ. ೩೦: ಲಿಟಲ್ ಸ್ಕಾಲರ್ಸ್ ಅಕಾಡೆಮಿಯು ಮೌಲ್ಯಯುತ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಅದರ ಜೊತೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದು ಪ್ರಶಂಸನೀಯವಾಗಿದೆ ಎಂದು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಪರ್ಲ್ ಚೆವುರ್ ಅವರು ಅಭಿಪ್ರಾಯಪಟ್ಟರು.
ಅವರು ವೀರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ಜರುಗಿದ ೨೦೨೬-೨೭ ನೇ ಸಾಲಿನ ಶಾಲಾ ನಾಯಕರುಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ನಾಯಕತ್ವವು ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯವಾಗಿದ್ದು ತಮಗೆ ವಹಿಸಿದ ಕಾರ್ಯವನ್ನು ಜವಾಬ್ದಾರಿಯಿಂದ ಮಾಡುವುದು ಮುಖ್ಯವಾಗಿರುತ್ತದೆ. ನಿಜವಾದ ನಾಯಕನು ದಯೆ, ಜವಾಬ್ದಾರಿ, ಪರಸ್ಪರ ಸಹಾಯ ಮಾಡುತ್ತಾನೆ ಹಾಗೂ ಇತರರಿಗೆ ಉತ್ತಮ ಉದಾಹರಣೆ ಆಗಿರುತ್ತಾನೆ. ತಂಡವನ್ನು ಮುನ್ನಡೆಸುವುದರ ಜೊತೆಗೆ ಸಮಾಜಕ್ಕೂ ಕೊಡುಗೆಯನ್ನು ನೀಡುತ್ತಾನೆ ಎಂದರು. ವಿದ್ಯಾರ್ಥಿಗಳು ಶಾಲೆಯಲ್ಲಿ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶಿಕ್ಷಕರಿಗೆ, ಪೋಷಕರಿಗೆ ಜೊತೆಗೆ ಶಾಲೆಗೂ ಕೀರ್ತಿ ತರುವಂತೆ ಕರೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಮೀರಾ ಪೂಣಚ್ಚ ಅವರು ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡರಲ್ಲಿಯೂ ಉತ್ತಮ ಸಾಧನೆಯನ್ನು ಮಾಡುತ್ತಿದ್ದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾಸಂಸ್ಥೆಯು ಸಾಮಾಜಿಕ ಕಾಳಜಿಯುಳ್ಳ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಗಮನಾರ್ಹ ವಿಚಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರು ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ಅವರು ಮಾತನಾಡಿ, ವಿದ್ಯಾಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತನ್ನು ನೀಡಲಾಗಿದೆ. ಸಂಸ್ಥೆಯಲ್ಲಿ ಅನುಭವಾತ್ಮಕ ಕಲಿಕೆಗೆ ಹೆಚ್ಚು ಮಹತ್ವವನ್ನು ನೀಡಲಾಗಿದ್ದು ಇನ್ನು ಮುಂದೆಯೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ನೂತನವಾಗಿ ಆಯ್ಕೆಗೊಂಡ ವಿದ್ಯಾರ್ಥಿ ನಾಯಕರುಗಳಿಗೆ ಅತಿಥಿಗಳು ಬ್ಯಾಡ್ಜ್ ಅನ್ನು ವಿತರಿಸಿದರು. ವಿದ್ಯಾರ್ಥಿನಿ ಆದ್ಯ ಆಕರ್ಷಕವಾಗಿ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿದರು. ಶಿಕ್ಷಕಿ ಕೃತ ಪೊನ್ನಮ್ಮ ಸ್ವಾಗತಿಸಿ, ನಿರೂಪಿಸಿ, ಬ್ಯೂಲಾ ಅತಿಥಿಗಳನ್ನು ಪರಿಚಯಿಸಿ, ವಿದ್ಯಾ ವಂದಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ನಿರ್ವಹಣೆಗಾರರಾದ ರವಿನ್ ರಿಚರ್ಡ್, ಶಿಕ್ಷಕರುಗಳು, ಪೋಷಕರು, ಸಿಬ್ಬಂದಿಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕರಾಗಿ ಆಯ್ಕೆ
೨೦೨೬-೨೭ ನೆ ಶೈಕ್ಷಣಿಕ ಸಾಲಿನಲ್ಲಿ ಶಾಲಾ ನಾಯಕನಾಗಿ ಕನಿಷ್ಕ್ ಪೂವಯ್ಯ ಬಿ.ಎಂ, ಶಾಲಾ ನಾಯಕಿಯಾಗಿ ಜೇಷ್ಠ ಪೂವಮ್ಮ ಡಿ.ಪಿ, ಸಾಂಸ್ಕೃತಿಕ ನಾಯಕರುಗಳಾಗಿ ಆರಾಧ್ಯ ಟಿ ಹೆಚ್, ಶ್ರೀನಿತ್ ಎನ್ ಎಸ್, ಕ್ರೀಡಾ ನಾಯಕರುಗಳಾಗಿ ಮೊಹಮ್ಮದ್ ರೈಹಾನ್ ಕೆ ಆರ್, ಹಸ್ಮಿತ ಟಿ ಎಂ, ಶಿಸ್ತು ಪಾಲನಾ ನಾಯಕರುಗಳಾಗಿ ಗಣಿಷ್ಕ ಸೋಮಣ್ಣ ಪಿ, ಆತ್ಮಿಕ್ ಎಂ ಶೆಟ್ಟಿ, ಚೆರಿ ಹೌಸ್ ನಾಯಕನಾಗಿ ಬಿಂಬ ಬಿ. ಆರ್, ಉಪನಾಯಕನಾಗಿ ಫಾಜ್ ಅಹಮದ್, ಓಕ್ ಹೌಸ್ ನಾಯಕನಾಗಿ ತ್ರಿಶಾನ್ ಕೆ. ಬಿ, ಉಪನಾಯಕರಾಗಿ ಲಿಯಾ ಶಫಿನ್, ಪೀಪಲ್ ಹೌಸ್ ನಾಯಕರಾಗಿ ಶಿವಾಂಗಿ ಪಿ. ಎಲ್, ಉಪನಾಯಕಿಯಾಗಿ ದೀಪ್ತಿ ಕೆ, ಫೈನ್ ಹೌಸ್ ನಾಯಕರಾಗಿ ಆದ್ಯ ಎನ್.ಎಲ್, ಉಪನಾಯಕನಾಗಿ ತನ್ಮಯ ರಾಹುಲ್ ಆಯ್ಕೆಗೊಂಡರು. ಶಾಲಾ ಮುಖ್ಯೋಪಾಧ್ಯಾಯರಾದ ಮೀರಾ ಪೂಣಚ್ಚ ಅವರು ನೂತನ ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.