ಸಮಾಜದ ನಾಡಿಮಿಡಿತವನ್ನು ಅರಿತು ಅದನ್ನು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಪತ್ರಿಕೋದ್ಯಮ ಹೊತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆAದು ಕರೆಯಲ್ಪಡುವ ಮಾಧ್ಯಮವು ಜನ ಮತ್ತು ಆಡಳಿತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸತ್ಯ, ನ್ಯಾಯ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿ ನಿಂತಿದೆ.
ಪ್ರತಿ ವರ್ಷ ಜುಲೈ ೧ರಂದು ಆಚರಿಸಲಾಗುವ ಪತ್ರಿಕಾ ದಿನಾಚರಣೆ ಪತ್ರಕರ್ತರ ಸೇವೆ, ಸಮರ್ಪಣೆ ಮತ್ತು ವೃತ್ತಿಪರತೆಯನ್ನು ಸ್ಮರಿಸುವ ದಿನವಾಗಿದೆ. ಸಮಾಜದಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆ, ಸಮಸ್ಯೆ, ಸಾಧನೆ ಮತ್ತು ಸವಾಲುಗಳನ್ನು ಜನರ ಮುಂದಿಡುವ ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವಲ್ಲಿ ಪತ್ರಕರ್ತರ ಪಾತ್ರ ಅನನ್ಯವಾಗಿದೆ.
ಕಾಫಿ, ಕ್ರೀಡೆ ಮತ್ತು ಪ್ರಕೃತಿ ಸೌಂದರ್ಯದ ನೆಲೆಯಾಗಿರುವ ಕೊಡಗು ಜಿಲ್ಲೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿದೆ. ಇಲ್ಲಿನ ಪತ್ರಕರ್ತರು ಕೇವಲ ಸುದ್ದಿಸಂಗ್ರಹ ಮತ್ತು ವರದಿಗಾರಿಕೆಗೆ ಸೀಮಿತವಾಗದೇ, ಸಮಾಜಮುಖಿ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪತ್ರಕರ್ತರ ವಿವಿಧ ಸಂಘಟನೆಗಳು ಜಿಲ್ಲೆಯಲ್ಲಿ ಕ್ರಿಯಶೀಲವಾಗಿವೆ. ಕೋವಿಡ್ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮಾಧ್ಯಮ ಸ್ಪಂದನ ಮೂಲಕ ಜೀವದ ಹಂಗುತೊರೆದು ಸಮಾಜಮುಖಿ ಕಾರ್ಯಗಳನ್ನು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಪತ್ರಕರ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಸಹ ನಿರಂತರವಾಗಿ ಹಮ್ಮಿಕೊಳ್ಳುತ್ತಿವೆ. ಕ್ರಿಕೆಟ್, ವಾಲಿಬಾಲ್, ಫುಟ್ ಬಾಲ್, ಜಲಕ್ರೀಡೆ, ಗ್ರಾಮೀಣ ಕ್ರೀಡೆ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯೋಜಿಸುವ ಮೂಲಕ ಪತ್ರಕರ್ತರಲ್ಲಿಯೂ ಕ್ರೀಡಾ ಸ್ಫೂರ್ತಿಯನ್ನು ಬೆಳೆಸುವ ಕೆಲಸವನ್ನು ಈ ಸಂಘಟನೆಗಳು ಮಾಡುತ್ತಿವೆ.
ಕೊಡಗಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ಅನೇಕ ಪತ್ರಕರ್ತರು ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಸಾಧನೆಗಳನ್ನು ದಾಖಲಿಸಿದ್ದಾರೆ. ಗ್ರಾಮೀಣ ಮಟ್ಟದಿಂದ ಹಿಡಿದು ರಾಜ್ಯಮಟ್ಟದ ಕ್ರೀಡಾಕೂಟಗಳವರೆಗೆ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಹಲವರು ಕ್ರೀಡಾ ತೀರ್ಪುಗಾರರು (ಎಂಪೈರ್‌ಗಳು), ಕ್ರೀಡಾ ಆಯೋಜಕರು ಹಾಗೂ ಕ್ರೀಡಾ ತಂಡಗಳ ಸಂಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವಲ್ಲಿ ಇವರ ಕೊಡುಗೆ ಗಮನಾರ್ಹವಾಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ಕ್ಷಣಾರ್ಧದಲ್ಲಿ ಹರಡುತ್ತಿರುವ ಸಂದರ್ಭದಲ್ಲಿ, ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಸಮಾಜದ ಧ್ವನಿಯಾಗಿ, ಸಮಸ್ಯೆಗಳ ಪ್ರತಿಬಿಂಬವಾಗಿ ಮತ್ತು ಜನರ ಆಶೋತ್ತರಗಳಿಗೆ ವೇದಿಕೆಯಾಗಿರುವ ಪತ್ರಿಕೋದ್ಯಮದ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ. ಪತ್ರಕರ್ತರ ಕಲಂ ಕೇವಲ ಸುದ್ದಿಗಳನ್ನು ಬರೆಯುವುದಕ್ಕಲ್ಲ; ಅದು ಸಮಾಜದ ನೋವು, ಆಸೆ, ಸಾಧನೆ ಮತ್ತು ಕನಸುಗಳಿಗೆ ಧ್ವನಿಯಾಗುತ್ತದೆ. ಸಮಾಜದ ಒಳಿತಿಗಾಗಿ ನಿರಂತರವಾಗಿ ದುಡಿ ಯುತ್ತಿರುವ ಪತ್ರಕರ್ತರ ಸೇವೆಯನ್ನು ಗೌರವಿ ಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜುಲೈ ೧ರ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಮಾಜದ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಕೊಡಗಿನ ಎಲ್ಲಾ ಪತ್ರಕರ್ತರಿಗೆ ಶುಭವಾಗಲಿ
- ಪುತ್ತರಿರ ಕರುಣ್ ಕಾಳಯ್ಯ
ಚೆಟ್ಟಳ್ಳಿ