೩ ಚಿನ್ನ, ೧ ಕಂಚು

ಮಡಿಕೇರಿ, ಜೂ. ೩೦: ಕೊಲಂಬೊದಲ್ಲಿ ನಡೆದ ಸಿಲೋನ್ ಮಾಸ್ಟರ್ಸ್ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ೨೦೨೬ ರಲ್ಲಿ, ಭಾರತೀಯ ಆಟಗಾರ್ತಿ ಕೊಡಗಿನವರಾದ ತಾತಪಂಡ ಜ್ಯೋತಿ ಸೋಮಯ್ಯ ಅದ್ಭುತ ಪ್ರದರ್ಶನ ನೀಡುವ ಮೂಲಕ ಸಾಧನೆ ತೋರಿದ್ದಾರೆ.

೬೦+ ಮತ್ತು ಕಂಬೈನ್ಡ್ (ಸಂಯೋಜಿತ) ವಯೋಮಿತಿ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿದ ಇವರು, ಒಟ್ಟು ಮೂರು ಚಿನ್ನ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತ ತಂಡದ ಪರವಾಗಿ ವೈಯಕ್ತಿಕವಾಗಿ ಅತ್ಯಧಿಕ ಚಿನ್ನದ ಪದಕಗಳನ್ನು ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

೬೦+ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ತೀವ್ರ ಪೈಪೋಟಿ ನಡೆಸಿ, ಯುಎಇಯ ವಿದ್ಯಾ ಮಂಘ್ನಾನಿ ವಿರುದ್ಧ ಮೂರು ಗೇಮ್‌ಗಳ ರೋಚಕ ಹೋರಾಟದಲ್ಲಿ (೨೧-೧೫, ೧೪-೨೧, ೨೧-೧೪) ಗೆದ್ದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ೬೦+ ಮಹಿಳೆಯರ ಡಬಲ್ಸ್ನಲ್ಲೂ ಸ್ವಿಟ್ಜರ್‌ಲ್ಯಾಂಡ್‌ನ ಕೃಷ್ಣವೇಣಿ ಮಟ್ಟೆರ್ ಅವರೊಂದಿಗೆ ಜೊತೆಯಾಗಿ, ಯುಎಇಯ ವಿದ್ಯಾ ಮಂಘ್ನಾನಿ ಮತ್ತು ದುಬೈನ ರಮಾ ಶಂಕರನ್ ನಾರಾಯಣ್ ಜೋಡಿಯನ್ನು ನೇರ ಸೆಟ್‌ಗಳ ಹಣಾಹಣಿಯಲ್ಲಿ (೨೧-೧೮, ೨೩-೨೧) ರೋಚಕವಾಗಿ ಸೋಲಿಸಿ ಎರಡನೇ ಚಿನ್ನ ಗೆದ್ದರು.

ಮೂರನೇ ಚಿನ್ನದ ಪದಕವು ಕಂಬೈನ್ಡ್ (೧೩೦+) ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಒಲಿಯಿತು. ಮಂಗಳೂರಿನ ಬೀನಾ ಶೆಟ್ಟಿ ಅವರೊಂದಿಗೆ ಜೋಡಿಯಾಗಿ ಆಡಿದ ಇವರು, ಶ್ರೀಲಂಕಾದ ಎನೋಕಾ ಜಯಲತ್ ಮತ್ತು ರೀಟಾ ಮನ್ನಪೇರುಮಾ ಜೋಡಿಯನ್ನು ೨೧-೭, ೨೧-೧೦ ರ ಭರ್ಜರಿ ಸೆಟ್‌ಗಳಿಂದ ಮಣಿಸಿದರು. ೬೦+ ಮಿಶ್ರ ಡಬಲ್ಸ್ (ಮಿಕ್ಸೆಡ್ ಡಬಲ್ಸ್) ವಿಭಾಗದಲ್ಲಿ ಮಂಗಳೂರಿನ ನಂಜುAಡ ಪೂಜಾರಿ ಅವರೊಂದಿಗೆ ಜೊತೆಯಾಗಿ ಆಡಿ, ಶ್ರೀಲಂಕಾದ ನಿರೋಷನಾ ವಿಜೆಕೂನ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಕೃಷ್ಣವೇಣಿ ಮಟ್ಟೆರ್ ವಿರುದ್ಧ ಕಠಿಣ ಹೋರಾಟ ನಡೆಸಿ (೨೧-೯, ೨೧-೧೫) ಕಂಚಿನ ಪದಕವನ್ನು ಗಳಿಸಿದ್ದಾರೆ. ಕೊಡಗಿನ ಹಿರಿಯ ಬ್ಯಾಡ್‌ಮಿಂಟನ್ ಆಟಗಾರ್ತಿಯಾಗಿರುವ ಜ್ಯೋತಿ ಸೋಮಯ್ಯ ಅವರು ಕಿರಿಯ ಕ್ರೀಡಾಪಟುಗಳಿಗೂ ತರಬೇತಿ ನೀಡುತ್ತಿದ್ದಾರಲ್ಲದೆ ವೈಯಕ್ತಿಕವಾಗಿಯೂ ಸಾಧನೆ ತೋರಿ ಗಮನ ಸೆಳೆಯುತ್ತಿದ್ದಾರೆ.