ನಾಪೋಕ್ಲು, ಜೂ. ೩೦: ಕೊಡಗಿನ ಪರಿಸರವನ್ನು ಸ್ವಚ್ಛ, ಸುಂದರ ಹಾಗೂ ಸುರಕ್ಷಿತವಾಗಿಡುವ ಉದ್ದೇಶದಿಂದ ಕ್ಲೀನ್ ಕೂರ್ಗ್ ತಂಡ ಹಮ್ಮಿಕೊಂಡಿರುವ ಸೈಕಲ್ ಜಾಥಾದ ಅಂಗವಾಗಿ ತಂಡದ ಸದಸ್ಯರು ವೀರಾಜಪೇಟೆಯಲ್ಲಿರುವ ಶಾಸಕ ಎ.ಎಸ್. ಪೊನ್ನಣ್ಣ ಅವರ ಗೃಹ ಕಚೇರಿಗೆ ಭೇಟಿ ನೀಡಿ ಅಭಿಯಾನದ ಉದ್ದೇಶ ಹಾಗೂ ಕಾರ್ಯಯೋಜನೆ ಕುರಿತು ವಿವರಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಕ್ಲೀನ್ ಕೂರ್ಗ್ ತಂಡದ ಪರಿಸರ ಕಾಳಜಿ ಮತ್ತು ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿದರು. “ಸ್ವಚ್ಛ ಕೊಡಗು” ಎಂಬ ಸಂಕಲ್ಪವನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ನಾಗರಿಕರ ಸಕ್ರಿಯ ಸಹಭಾಗಿತ್ವ ಅಗತ್ಯವಾಗಿದೆ. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಅಭಿಯಾನಗಳು ಸಮಾಜಕ್ಕೆ ಮಾದರಿಯಾಗಿದ್ದು, ನಿರಂತರವಾಗಿ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕ್ಲೀನ್ ಕೂರ್ಗ್ ತಂಡದ ಜನಜಾಗೃತಿ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ತಿಳಿಸಿದ ಶಾಸಕರು, ಕೊಡಗಿನ ನೈಸರ್ಗಿಕ ಸೌಂದರ್ಯ ಮತ್ತು ಪರಿಸರವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು. ಈ ಸಂದರ್ಭ ಕ್ಲೀನ್ ಕೂರ್ಗ್ ತಂಡದ ಸದಸ್ಯರಾದ ಬಡುವಂಡ ಅರುಣ್ ಅಪ್ಪಚ್ಚು, ಅಚ್ಚಕಾಳೇರ ಅಶ್ವಥ್, ಕಟ್ಟೇರ ಗೌತಮ್, ಐಚೆಟ್ಟಿರ ಸುಬ್ಬಯ್ಯ, ಚಂಗAಡ ಮುತ್ತಣ್ಣ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.