ಮಡಿಕೇರಿ ಜು. ೩: ಮಹತ್ಮಾ ಗಾಂಧಿ ನರೇಗಾ ಯೋಜನೆ ಬದಲಾಗಿ ಕೇಂದ್ರ ಸರ್ಕಾರ ರೂಪಿಸಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆ ದೇಶಾದ್ಯಂತ ಜಾರಿಗೆ ಬಂದಿದ್ದು, ವೀರಾಜಪೇಟೆ ತಾಲೂಕಿನಲ್ಲಿ ಅನುಷ್ಠಾನಕ್ಕೆ ಸಿದ್ಧತೆ ಆರಂಭಿಸಲಾಗಿದೆ.
ವೀರಾಜಪೇಟೆ ತಾಲೂಕು ಸಾಮರ್ಥ್ಯ ಸೌಧದಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆ ಸಂಬAಧಿಸಿದAತೆ ಒಂದು ದಿನದ ಕಾರ್ಯಾಗಾರಕ್ಕೆ ವೀರಾಜಪೇಟೆ ತಾ.ಪಂ. ಇಒ ರಾಜೇಶ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜಿವಿಕ್ ಮಿಷನ್ (ಗ್ರಾಮೀಣ) ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡುವ ಉದ್ದೇಶದಿಂದ ರೂಪುರೇಷೆ ಸಿದ್ದ ಮಾಡಿಕೊಳ್ಳಲಾಗುತ್ತಿದ್ದು, ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.
ವಿಬಿಜಿ ರಾಮ್ಜಿ ಕಾಯ್ದೆ ವೈಶಿಷ್ಟö್ಯಗಳು, ಸಾಂಸ್ಥಿಕ ರಚನೆ ಮತ್ತು ಸಾಂಸ್ಥಿಕ ಚೌಕಟ್ಟು ಮತ್ತು ಯೋಜನಾ ಚೌಕಟ್ಟು, ಯೋಜನಾ ಪ್ರಕ್ರಿಯೆಯ ಹಂತಗಳು ಮತ್ತು ಒಗ್ಗೂಡಿಸುವಿಕೆ ಬಗ್ಗೆ ಸಹಾಯಕ ನಿರ್ದೇಶಕ ಎಂ.ಡಿ. ಶ್ರೀನಿವಾಸ್ (ಗ್ರಾ.ಉ.) ಮಾಹಿತಿ ನೀಡಿದರು.
ಯೋಜನೆಯಡಿಯಲ್ಲಿ ತಂತ್ರಜ್ಞಾನದ ಪಾತ್ರ ಮತ್ತು ಅನುಮತಿಸಲಾದ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ತಾಲೂಕು ಐಇಸಿ ಸಂಯೋಜಕ ನರೇಂದ್ರ ನೀಡಿದರು.
ಅರ್ಹ ಗ್ರಾಮೀಣಾ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ೧೨೫ ದಿನಗಳ ಉದ್ಯೋಗ ಕಲ್ಪಿಸಲಾಗುವುದು. (ಗಂಡು ಹೆಣ್ಣಿಗೆ ಸಮಾನ ಕೂಲಿ ರೂ. ೩೮೨.) ಈ ಯೋಜನೆಯು ಭಾರತ ಸರ್ಕಾರದ ಒಂದು ಮಹತ್ವಕಾಂಕ್ಷೆಯ ದೃಷ್ಟಿಕೋನವಾಗಿದ್ದು, ೨೦೪೭ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟçವನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿ, ವೀರಾಜಪೇಟೆ/ ಪೊನ್ನಂಪೇಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಯೋಜನೆಯ ತಾಂತ್ರಿಕ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಡೇಟಾ ಎಂಟ್ರಿ ಅಪರೇಟರ್, ಇತರರು ಉಪಸ್ಥಿತರಿದ್ದರು.