ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಜು. ೫: ಜೈಲಿನಲ್ಲಿರುವ ವಿಚಾರಣಾಧೀನ ಖೈದಿಯೊಬ್ಬನ ಆಸ್ತಿಯ ಮೇಲಿನ ಹಕ್ಕುಗಳು ಇದೇ ಕಾರಣಕ್ಕೆ ಕಳೆದುಹೋಗುವುದಿಲ್ಲ ಅಥವಾ ನಿರಾಕರಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪರಾಧ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿ ನೋಂದಣಾಧಿಕಾರಿಗಳ ಕಚೇರಿಗೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದಿದ್ದರೂ, ಆ ಕಾರಣವನ್ನೇ ಮುಂದಿಟ್ಟುಕೊAಡು ಆತನಿಗೆ ಆಸ್ತಿ ಮಾರಾಟ ಅಥವಾ ನೋಂದಣಿ ಮಾಡುವ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿ ಬಸವರಾಜು ಶಂಕರಪ್ಪ ಅವ್ವಣ್ಣವರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಜೈಲು ಶಿಕ್ಷೆ ಅಥವಾ ನ್ಯಾಯಾಂಗ ಬಂಧನವು ವ್ಯಕ್ತಿಯ ನಾಗರಿಕ ಹಕ್ಕುಗಳನ್ನು ಸಂಪೂರ್ಣವಾಗಿ ಕಸಿದುಕೊಳ್ಳುವುದಿಲ್ಲ. ಆದ್ದರಿಂದ ವಿಚಾರಣಾಧೀನ ಖೈದಿಯೂ ತನ್ನ ಚರ ಹಾಗೂ ಸ್ಥಿರ ಆಸ್ತಿಯ ಮೇಲೆ ಸಂಪೂರ್ಣ ಕಾನೂನುಬದ್ಧ ಹಕ್ಕು ಹೊಂದಿರುತ್ತಾನೆ ಎಂದು ನ್ಯಾಯಾಲಯ ಹೇಳಿದೆ.

ಆಸ್ತಿಯನ್ನು ಮಾರಾಟ ಮಾಡುವುದು, ಉಡುಗೊರೆಯಾಗಿ ನೀಡುವುದು, ವರ್ಗಾವಣೆ ಮಾಡುವುದು ಅಥವಾ ಇತರ ಯಾವುದೇ ಕಾನೂನುಬದ್ಧ ವ್ಯವಹಾರ ನಡೆಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ವ್ಯಕ್ತಿ ಜೈಲಿನಲ್ಲಿದ್ದಾನೆ ಎಂಬ ಕಾರಣಕ್ಕೆ ಆ ಹಕ್ಕುಗಳನ್ನು ಅಮಾನತುಗೊಳಿಸಲಾಗದು. ಜೈಲಿನಲ್ಲಿರುವುದು "ನಾಗರಿಕ ಮರಣ"ಕ್ಕೆ ಸಮಾನವಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ನೋಂದಣಿ ಕಾಯ್ದೆ-೧೯೦೮ರ ಸೆಕ್ಷನ್ ೩೮ರ ಉಲ್ಲೇಖ ಮಾಡಿರುವ ನ್ಯಾಯಾಲಯ, ಜೈಲಿನಲ್ಲಿರುವ ವ್ಯಕ್ತಿಗಳಿಗೆ ಪ್ರತ್ಯೇಕ ಕಾನೂನು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದೆ. ಅಂತಹ ಸಂದರ್ಭಗಳಲ್ಲಿ ಉಪನೋಂದಣಾಧಿಕಾರಿಯೇ ಕಾರಾಗೃಹಕ್ಕೆ ತೆರಳಿ ದಾಖಲಾತಿಗಳ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ಜೈಲು ಅಧಿಕಾರಿಗಳು ಇದಕ್ಕೆ ಅಗತ್ಯ ಸಹಕಾರ ಹಾಗೂ ಭದ್ರತೆ ಒದಗಿಸುವುದು ಅವರ ಕಾನೂನುಬದ್ಧ ಜವಾಬ್ದಾರಿ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅರ್ಜಿದಾರರು ಯಾವುದೇ ಹೆಚ್ಚಿನ ಸೌಲಭ್ಯ ಕೇಳಿಲ್ಲ. ಕಾನೂನು ನೀಡಿರುವ ಹಕ್ಕನ್ನು ಜಾರಿಗೊಳಿಸುವಂತೆ ಮಾತ್ರ ಮನವಿ ಮಾಡಿದ್ದಾರೆ. ಆಡಳಿತಾತ್ಮಕ ಕಾರಣಗಳು ಅಥವಾ ತಾಂತ್ರಿಕ ನೆಪಗಳನ್ನು ಮುಂದಿಟ್ಟು ನಾಗರಿಕನ ಕಾನೂನುಬದ್ಧ ಹಕ್ಕುಗಳನ್ನು ನಿರಾಕರಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಅಗತ್ಯ ಅನುಮತಿ ನೀಡುವಂತೆ ಹಾಗೂ ಉಪನೋಂದಣಾಧಿಕಾರಿ ಜೈಲಿಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ರೀತಿಯ ಸಹಕಾರ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ: ಬಸವರಾಜು ಶಂಕರಪ್ಪ ಅವ್ವಣ್ಣವರ ಅವರು ಅಪರಾಧ ಪ್ರಕರಣವೊಂದರಲ್ಲಿ ವಿಚಾರಣಾಧೀನ ಖೈದಿಯಾಗಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇದೇ ವೇಳೆ ತಮ್ಮ ಹೆಸರಿನ ೨೨ ಗುಂಟೆ ಜಮೀನನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಆದರೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸಬ್-ರೆಜಿಸ್ಟಾçರ್ ಕಚೇರಿಗೆ ಖುದ್ದಾಗಿ ತೆರಳಲು ಸಾಧ್ಯವಾಗಲಿಲ್ಲ.

ಉಪನೋಂದಣಾಧಿಕಾರಿಗಳು ಜೈಲಿಗೆ ಬಂದು ನೋಂದಣಿ ನಡೆಸಲು ಸಿದ್ಧತೆ ತೋರಿದ್ದರೂ, ಜೈಲು ಅಧಿಕಾರಿಗಳು ಅಗತ್ಯ ಅನುಮತಿ ಮತ್ತು ಸಹಕಾರ ನೀಡಲಿಲ್ಲ. ಇದರಿಂದ ಆಸ್ತಿ ಮಾರಾಟ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ನಂತರ ಬಸವರಾಜು ಹೈಕೋರ್ಟ್ ಮೊರೆ ಹೋಗಿ, ತನ್ನ ಕಾನೂನುಬದ್ಧ ಹಕ್ಕು ರಕ್ಷಿಸುವಂತೆ ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣಾಧೀನ ಖೈದಿಯ ಆಸ್ತಿ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಜೈಲಿನಲ್ಲಿದ್ದರೂ ಕಾನೂನುಬದ್ಧವಾಗಿ ಆಸ್ತಿ ನೋಂದಣಿ ಹಾಗೂ ವರ್ಗಾವಣೆ ನಡೆಸಲು ಅವಕಾಶ ನೀಡಬೇಕೆಂಬ ಮಹತ್ವದ ಆದೇಶ ಹೊರಡಿಸಿದೆ. ಈ ತೀರ್ಪು ಮುಂದಿನ ದಿನಗಳಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳ ಆಸ್ತಿ ವ್ಯವಹಾರಗಳಿಗೆ ಮಾರ್ಗದರ್ಶಿಯಾಗುವ ಸಾಧ್ಯತೆ ಇದೆ.