ಸುಂಟಿಕೊಪ್ಪ, ಜು. ೫: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಭೂತನಕಾಡು ರಸ್ತೆಯ ಬಹುದಿನಗಳ ಬೇಡಿಕೆಯಾಗಿದ್ದ ಅಭಿವೃದ್ಧಿಗೆ ರೂ. ೩೦ ಲಕ್ಷಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ಗ್ರಾಮೀಣ ಭಾಗದ ರಸ್ತೆ ಸಂಪರ್ಕವನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ಈ ಭಾಗದಲ್ಲಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ಗುಣಮಟ್ಟದಿಂದ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಕಾಡುಪ್ರಾಣಿಗಳ ಉಪಟಳ ಹಾಗೂ ವಿದ್ಯುತ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರಕ್ಕಿಂತ ಹೆಚ್ಚಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕೆದಕಲ್ ಗ್ರಾಮದ ಕಾಫಿ ಬೆಳೆಗಾರರು ಹಾಗೂ ಗ್ರಾಮಸ್ಥರು ತಮ್ಮ ಹತ್ತಾರು ಸಮಸ್ಯೆಗಳ ಸರಮಾಲೆಯನ್ನೇ ಶಾಸಕರ ಮುಂದೆ ತೆರೆದಿಟ್ಟು ಕಾಡಾನೆ ಹಾಗೂ ಕಾಡೆಮ್ಮೆಗಳ ನಿರಂತರ ದಾಳಿಯಿಂದಾಗಿ ತೋಟ-ಗದ್ದೆಗಳು ನಾಶವಾಗುತ್ತಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸಕಾಲದಲ್ಲಿ ಮಳೆಯಾಗದೆ ಕೃಷಿಕರು ಸಂಪೂರ್ಣವಾಗಿ ಕಂಗೆಟ್ಟಿದ್ದಾರೆ. ಮಳೆಗಾಲದ ಸಮಯದಲ್ಲಿ ತೀವ್ರ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು, ಗ್ರಾಮಸ್ಥರು ಕತ್ತಲಲ್ಲಿ ಕಳೆಯುವಂತಾಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿ ಗಮನ ಸೆಳೆದರು.
ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲೆ. ಕಾಡುಪ್ರಾಣಿಗಳ ದಾಳಿ ತಡೆಗೆ ಹಾಗೂ ಮಳೆಗಾಲದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕಾಮಗಾರಿಗಳು ವಿಳಂಬವಾಗದAತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೆದಕಲ್ ಗ್ರಾಮದ ಪ್ರಮುಖ ಕಾಫಿ ಬೆಳೆಗಾರರಾದ ಬಾಲಕೃಷ್ಣ ರೈ, ಸಂಜು ಪೊನ್ನಪ್ಪ, ದೇವಿಪ್ರಸಾದ್ ಕಾಯರ್ಮಾರ್, ವೆಂಕಪ್ಪ ಶಿವು ಸೋಮಣ್ಣ, ಸಂತೋಷ ಪೂವಯ್ಯ, ಕೊರವಂಡ ನರೇನ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.