ಮಡಿಕೇರಿ, ಜು. ೯: ಇತ್ತೀಚಿಗಷ್ಟೆ ಉಪಲೋಕಾಯುಕ್ತ ಫಣೀಂದ್ರ ಅವರು ನಗರದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಬೆನ್ನಲ್ಲೆ ಇದೀಗ ಮತ್ತೇ ಜಿಲ್ಲಾಮಟ್ಟದ ಲೋಕಾಯುಕ್ತ ಅಧಿಕಾರಿಗಳ ತಂಡ ಕಚೇರಿಗೆ ತೆರಳಿ ಕಡತ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದೆ.
ಉಪಲೋಕಾಯುಕ್ತರು ಭೇಟಿ ನೀಡಿದ್ದ ಸಂದರ್ಭ ಅನಿರೀಕ್ಷಿತ ಭೇಟಿ ಕೈಗೊಂಡು ಕಡತ ಹಾಗೂ ದಾಖಲೆಗಳ ಪರಿಶೀಲನೆಯೊಂದಿಗೆ ವ್ಯವಸ್ಥೆಗಳ ಕುರಿತು ಪರಿಶೀಲಿಸಲು ಹಾಗೂ ಕೆಲವೊಂದು ದಾಖಲೆಗಳನ್ನು ರವಾನಿಸುವಂತೆ ಜಿಲ್ಲಾಮಟ್ಟದ ಲೋಕಾಯುಕ್ತ ಅಧಿಕಾರಿಗಳಿಗೆ ಸೂಚಿಸಿದ್ದರು.
ಈ ಹಿನ್ನೆಲೆ ಇಂದು ಲೋಕಾಯುಕ್ತ ಡಿವೈಎಸ್‌ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ ದಿಢೀರ್ ಕಾರ್ಯಾಚರಣೆ ಕೈಗೊಂಡು ಆರ್‌ಟಿಓ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದಿಂದ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿದರು. ಕಚೇರಿಯ ಕಾರ್ಯವೈಖರಿ, ಕಡತಗಳ ನಿರ್ವಹಣೆ ಹಾಗೂ ಸಾರ್ವಜನಿಕ ಸೇವೆಗಳ ಕುರಿತು ತಂಡ ಮಾಹಿತಿ ಸಂಗ್ರಹಿಸಿತು.