ಗೋಣಿಕೊಪ್ಪಲು, ಜು. ೯: ರೂ. ೪ ಕೋಟಿ ವೆಚ್ಚದಲ್ಲಿ ಗೋಣಿಕೊಪ್ಪದಲ್ಲಿ ನಿರ್ಮಾಣಗೊಂಡ ಹೈಟೆಕ್ ಬಸ್ ನಿಲ್ದಾಣವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಉದ್ಘಾಟಿಸಿದರು.

ಗೋಣಿಕೊಪ್ಪದಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ಕೊರತೆಯಿಂದ ಕಳೆದ ಸುಮಾರು ೧೦ ವರ್ಷಗಳಿಂದ ಪ್ರಯಾಣಿಕರು ಹಾಗೂ ಸ್ಥಳೀಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ವಿಶೇಷ ಮುತುವರ್ಜಿ ವಹಿಸಿ ೪ ಕೋಟಿ ಅನುದಾನ ಬಿಡುಗಡೆಗೊಳಿಸಿ ಹೈಟೆಕ್ ಮಾದರಿಯ ಬಸ್ ನಿಲ್ದಾಣ ನಿರ್ಮಿಸಲಾಗಿದೆ ಎಂದು ಪೊನ್ನಣ್ಣ ಹೇಳಿದರು.

ಸ್ವಾತಂತ್ರö್ಯ ಹೋರಾಟಗಾರ ಕೊಳ್ಳಿಮಾಡ ಕರುಂಬಯ್ಯ ಅವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ನೂತನ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ದೇಶಸೇವೆಗೆ ತಮ್ಮದೇ ಆದ ಕೊಡುಗೆ ನೀಡಿದ ಮಹನೀಯರ ನೆನಪು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂಬ ಆಶಯದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನೂತನ ಬಸ್ ನಿಲ್ದಾಣದ ಮತ್ತೊಂದು ವಿಶೇಷತೆಯಾಗಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕೊಡಗಿನ ಗಾಂಧಿ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಎಂದೇ ಖ್ಯಾತರಾದ ಪಂದ್ಯAಡ ಬೆಳ್ಯಪ್ಪ ಅವರ ಪುತ್ಥಳಿಗಳನ್ನು ಅನಾವರಣಗೊಳಿಸಲಾಗುತ್ತಿದೆ. ಇದರ ಮೂಲಕ ಮಹನೀಯರ ಆದರ್ಶಗಳನ್ನು ಜನತೆಗೆ ಸದಾ ನೆನಪಿಸುವ ಕಾರ್ಯವಾಗಲಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಶಾಸಕ ಪೊನ್ನಣ್ಣ, ಗೋಣಿಕೊಪ್ಪ ನಗರದಲ್ಲಿ ಹಲವು ವರ್ಷಗಳಿಂದ ಹಕ್ಕುಪತ್ರಗಳಿಂದ ವಂಚಿತರಾಗಿದ್ದ ೨೪೦ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಶಾಸಕ ಎ.ಎಸ್. ಪೊನ್ನಣ್ಣ ಅವರು ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ತೀವ್ರವಾಗಿರುವ ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕಾಗಿ ಅವರನ್ನು ಮುಂದಿನ ಸಚಿವ ಸಂಪುಟದಲ್ಲಿ ಅರಣ್ಯ ಸಚಿವರನ್ನಾಗಿ ನೇಮಿಸಲಿ ಎಂಬ ಆಶಯ ವ್ಯಕ್ತಪಡಿಸಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಪ್ರಮುಖರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಪಿ.ಕೆ. ಪೊನ್ನಪ್ಪ, ಮೂಕಳೇರ ಕುಶಾಲಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಸೇರಿದಂತೆ ಹಲವು ಇನ್ನಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ಕಲ್ಪನ ಪ್ರಾರ್ಥಿಸಿದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು ಸ್ವಾಗತಿಸಿದರು. ಕಂದಾ ದೇವಯ್ಯ ಕಾರ್ಯಕ್ರಮ ನಿರೂಪಿಸಿದರು. ಶಾಜಿ ಅಚ್ಚುತನ್ ವಂದಿಸಿದರು.