ಪೊನ್ನಂಪೇಟೆ, ಜು. ೧೨: ಮಾನವೀಯತೆ ಮೆರೆದ ಎಸ್‌ಕೆಎಸ್‌ಎಸ್‌ಎಫ್ ವಿಖಾಯಾ ಸಂಘಟನೆಯ ಕಾರ್ಯಕರ್ತರು ಅಪಘಾತಕ್ಕೀಡಾದ ಇಬ್ಬರು ಗಾಯಾಳುಗಳ ರಕ್ಷಣೆಗೆ ಧಾವಿಸಿ ಮಾದರಿಯಾದ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ.

ಪೊನ್ನಂಪೇಟೆಯ ಶಫೀರ್, ಇರ್ಷಾದ್, ಆಸ್ಕರ್ ಹಾಗೂ ಅಫ್ಜಲ್ ಅವರು ತಮ್ಮ ಸ್ನೇಹಿತ ಫಿರೋಜ್ ಅವರ ತಂದೆಯವರ ಅಂತ್ಯಕ್ರಿಯೆಯಲ್ಲಿ ತೊಡಗಿದ್ದ ವೇಳೆ ಸಮೀಪದ ಮುಖ್ಯ ರಸ್ತೆಯಲ್ಲಿ ಬೈಕ್ ಅಪಘಾತ ಸಂಭವಿಸಿರುವುದನ್ನು ಗಮನಿಸಿದರು. ತಕ್ಷಣ ದಫನ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅಪಘಾತ ಸ್ಥಳಕ್ಕೆ ಧಾವಿಸಿದ ಅವರು, ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಇಬ್ಬರಿಗೆ ಪ್ರಾಥಮಿಕ ನೆರವು ನೀಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಬಳಿಕ ಸಂಘಟನೆಯ ವಾಹನದ ಮೂಲಕ ಗಾಯಾಳುಗಳನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಿದರು.