ಸುಂಟಿಕೊಪ್ಪ, ಜು. ೧೨: ಬಹುದಿನಗಳ ಬೇಡಿಕೆಯಾಗಿರುವ ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣದ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಸುಂಟಿಕೊಪ್ಪದ ವಾರದ ಸಂತೆ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಸ್ಥರು, ಗ್ರಾಹಕರು ಹಾಗೂ ನಾಗರಿಕರೊಂದಿಗೆ ಚರ್ಚೆ ನಡೆಸಿದರು.
ಲೋಟಸ್ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದು ಹಲವು ಸಮಯದಿಂದ ನೆನೆಗುದಿಗೆ ಬಿದ್ದಿರುವ ನೂತನ ಸಂತೆ ಮಾರುಕಟ್ಟೆಯನ್ನು ವೀಕ್ಷಿಸಿದ ಶಾಸಕರು ಬಳಿಕ ಪ್ರಸ್ತುತ ಸಂತೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯ ಆಲಿಸಿದರು.
ನೂತನ ಮಾರುಕಟ್ಟೆಗೆ ಸ್ಥಳಾಂತರಿಸುವ ಕುರಿತು ವ್ಯಾಪಾರಸ್ಥರು, ಗ್ರಾಹಕರು ಹಾಗೂ ಸಾರ್ವಜನಿಕರಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರದೊಳಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಜನಾಭಿಪ್ರಾಯ ಸಭೆ ನಡೆಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಅವರಿಗೆ ಶಾಸಕರು ಸೂಚಿಸಿದರು. ತಾ. ೨೧ರೊಳಗೆ ಸಭೆ ನಡೆಸುವಂತೆ ಗಡುವು ನೀಡಿದ ಅವರು, ಬಳಿಕ ವಿಶೇಷ ಗ್ರಾಮಸಭೆ ಕರೆಯುವಂತೆ ನಿರ್ದೇಶನ ನೀಡಿದರು. ಈ ಎರಡೂ ಸಭೆಗಳಲ್ಲಿ ತಾವು ಭಾಗವಹಿಸುವುದಾಗಿ ಶಾಸಕರು ತಿಳಿಸಿದರು.
ಈಗಾಗಲೇ ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರದಿಂದ ಸಾಕಷ್ಟು ಅನುದಾನ ಖರ್ಚು ಮಾಡಲಾಗಿದೆ. ಆದರೆ ಮೂಲಸೌಕರ್ಯಗಳ ಕೊರತೆ ಇನ್ನೂ ಬಾಕಿಯಿದ್ದು, ಸ್ಥಳಾಂತರದ ಬಗ್ಗೆ ಸಾರ್ವಜನಿಕರ ಬಹುಮತದ ಅಭಿಪ್ರಾಯಕ್ಕೆ ಆದ್ಯತೆ ನೀಡಲಾಗುವುದು ಎಂದು ಡಾ. ಮಂತರ್ ಗೌಡ ಹೇಳಿದರು.
ಮೀನು ಮತ್ತು ಮಾಂಸ ಮಾರುಕಟ್ಟೆ ಹರಾಜಾಗದೆ ಪಂಚಾಯಿತಿಗೆ ಆದಾಯ ನಷ್ಟವಾಗುತ್ತಿರುವ ವಿಷಯವನ್ನು ವ್ಯಾಪಾರಸ್ಥರು ಶಾಸಕರ ಗಮನಕ್ಕೆ ತಂದರು. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಆರು ಗ್ರಾಮ ಪಂಚಾಯಿತಿಗಳು ಅವಲಂಬಿತವಾಗಿದ್ದು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ. ರಾಷ್ಟಿçÃಯ ಹೆದ್ದಾರಿ-೨೭೫ ಸುಂಟಿಕೊಪ್ಪದ ಮಧ್ಯಭಾಗದಲ್ಲಿ ಹಾದು ಹೋಗುತ್ತಿರುವುದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು.
ನೂತನ ಮಾರುಕಟ್ಟೆಗೆ ಸ್ಥಳಾಂತರವಾದ ಬಳಿಕ ಹಳೆಯ ಮಾರುಕಟ್ಟೆ ಜಾಗವನ್ನು ಬಸ್ ನಿಲ್ದಾಣವಾಗಿ ಪರಿವರ್ತಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ಜಾಗವನ್ನು ಕೆಎಸ್ಆರ್ಟಿಸಿಗೆ ನೀಡಿದರೆ ಖಾಸಗಿ ಬಸ್ಗಳಿಗೆ ಅವಕಾಶ ಇರುವುದಿಲ್ಲ. ಪಂಚಾಯಿತಿ ವತಿಯಿಂದಲೇ ಬಸ್ ನಿಲ್ದಾಣ ನಿರ್ಮಿಸಿದರೆ ಸರ್ಕಾರಿ ಹಾಗೂ ಖಾಸಗಿ ಬಸ್ಗಳ ನಿಲುಗಡೆಗೆ ಅವಕಾಶ ದೊರೆಯಲಿದೆ. ಇದರಿಂದ ಪಂಚಾಯಿತಿ ಆದಾಯಕ್ಕೂ ಅನುಕೂಲವಾಗಲಿದೆ ಎಂದು ಶಾಸಕರು ವಿವರಿಸಿದರು. ಸುಂಟಿಕೊಪ್ಪದ ಅಭಿವೃದ್ಧಿಗೆ ಗ್ರಾಮಸ್ಥರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿ ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ಈ ಸಂದರ್ಭ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಸುಂಟಿಕೊಪ್ಪ ನಗರ ಕಾಂಗ್ರೆಸ್ ರಫೀಕ್ ಖಾನ್, ಸುಂಟಿಕೊಪ್ಪ ಕಾಂಗ್ರೆಸ್ ಹೋಬಳಿ ಅಧ್ಯಕ್ಷ ರಜಾಕ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಹಕೀಂ, ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಶಿವಮ್ಮ ಮಹೇಶ್, ಕೆ.ಇ. ಕರೀಂ, ಪಿ.ಎಫ್. ಸಬಾಸ್ಟೀನ್, ಎಂ.ಎ.ಉಸ್ಮಾನ್, ಮಾಜಿ ಸದಸ್ಯರುಗಳಾದ ಜೀನಾಸುದ್ಧಿನ್, ಕೆ.ಎಂ.ಆಲಿಕುಟ್ಟಿ, ಪಕ್ಷದ ಮುಖಂಡರುಗಳಾದ ಅಬ್ದುಲ್ ಅಜೀಜ್, ಯಂಕನ ಶ್ರೀರಾಮ್, ಹಿರಿಯ ವರ್ತಕರಾದ ಎಂ.ಎ. ವಸಂತ, ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ, ಗ್ರೇಸಿ ಡೇವಿಡ್, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ರಾಜ್ ಹಾಗೂ ಗ್ರಾಮಸ್ಥರು ಇದ್ದರು.