ಕುಶಾಲನಗರ, ಜು. ೧೨: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್) ಕರ್ತವ್ಯ ನಿರ್ವಹಿಸುವ ವೇಳೆ ಉಗ್ರರ ದಾಳಿಗೆ ಬಲಿಯಾದ ಹಾರಂಗಿ ನಿವಾಸಿ ವೀರ ಯೋಧ ಕೆ. ರಾಘವೇಂದ್ರ ಅವರ ಹೆಸರನ್ನು ಹಾರಂಗಿ ಕ್ರೀಡಾಂಗಣಕ್ಕೆ ನಾಮಕರಣ ಮಾಡಲಾಯಿತು.

ಹಾರಂಗಿ ನೀರಾವರಿ ಇಲಾಖೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ, ಭಾರತ ಸರ್ಕಾರದ ಗೃಹ ಸಚಿವಾಲಯ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಯೋಧನ ಕುಟುಂಬದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಂಗಣಕ್ಕೆ ಧೀರ ಹೃದಯಿ ರಾಘವೇಂದ್ರ ಕೆ. ಕ್ರೀಡಾಂಗಣ ಎಂದು ನಾಮಕರಣ ಮಾಡಲಾಯಿತು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹಾಗೂ ಸಿಐಎಸ್‌ಎಫ್ ಡಿಐಜಿ ನೆಲ್ಲೂರು ಪೆರುಮಾಳ್ ಅವರು ಕ್ರೀಡಾಂಗಣದ ನಾಮಫಲಕವನ್ನು ಉದ್ಘಾಟಿಸಿದರು. ಬಳಿಕ ಹುತಾತ್ಮ ಯೋಧ ರಾಘವೇಂದ್ರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಸ್ವಾತಂತ್ರö್ಯ ಹೋರಾಟಗಾರರ ಕುಟುಂಬದಿAದ ಬಂದ ರಾಘವೇಂದ್ರ ಅವರ ದೇಶ ಸೇವೆ ಸದಾ ಸ್ಮರಣೀಯವಾಗಿರಬೇಕು. ಅವರ ಹೆಸರು ಯುವಜನತೆಗೆ ಪ್ರೇರಣೆಯಾಗಬೇಕು. ಕ್ರೀಡಾಂಗಣಕ್ಕೆ ಅವರ ಹೆಸರನ್ನು ಇಟ್ಟಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದ ಅವರು, ಕ್ರೀಡಾಂಗಣದ ಅಭಿವೃದ್ಧಿಗಾಗಿ ಶಾಸಕರ ನಿಧಿಯಿಂದ ರೂ. ೧೫ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಹಾರಂಗಿ ಬಸ್ ನಿಲ್ದಾಣಕ್ಕೂ ವೀರ ಯೋಧ ರಾಘವೇಂದ್ರ ಅವರ ಹೆಸರಿಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಮೈದಾನದ ಅಭಿವೃದ್ಧಿ ಹಾಗೂ ಗ್ಯಾಲರಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಐಜಿ ನೆಲ್ಲೂರು ಪೆರುಮಾಳ್ ಮಾತನಾಡಿ, ರಾಘವೇಂದ್ರ ಅವರ ದೇಶ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಹುತಾತ್ಮ ಯೋಧರ ಸ್ಮರಣೆಯನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಕ್ರೀಡಾಂಗಣಕ್ಕೆ ಅವರ ಹೆಸರು ನಾಮಕರಣ ಮಾಡಿರುವುದು ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹಾಗೂ ರಾಘವೇಂದ್ರ ಅವರ ಸಹೋದರ ಸುರೇಶ್ ಬಾಬು ಮಾತನಾಡಿದರು.

ಇದೇ ಸಂದರ್ಭ ಹುತಾತ್ಮ ಯೋಧ ರಾಘವೇಂದ್ರ ಅವರ ತಾಯಿ ಕಮಲಮ್ಮ ಹಾಗೂ ಸಿಐಎಸ್‌ಎಫ್ ಅಧಿಕಾರಿಗಳನ್ನು ಶಾಸಕ ಡಾ. ಮಂತರ್ ಗೌಡ ಸನ್ಮಾನಿಸಿದರು. ಕಾರ್ಯಕ್ರಮದ ಅಂಗವಾಗಿ ಕ್ರೀಡಾಂಗಣ ಆವರಣದಲ್ಲಿ ಗಿಡ ನೆಡಲಾಯಿತು.

ಈ ಸಂದರ್ಭ ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಕಿರಿಯ ಇಂಜಿನಿಯರ್ ಕಿರಣ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ನಟೇಶ್ ಗೌಡ, ಸಿಐಎಸ್‌ಎಫ್ ಮೈಸೂರು ವಿಭಾಗದ ಅಸಿಸ್ಟೆಂಟ್ ಕಮಾಂಡರ್ ಯೋಗೇಶ್ ಚಂದ್ರ ಮಿಶ್ರ, ಇನ್ಸ್ಪೆಕ್ಟರ್ ಆರ್.ಕೆ. ಗೌತಮ್, ಪಿಎಸ್‌ಐಗಳಾದ ರಾಹುಲ್, ಹರಿಕೃಷ್ಣ, ತರಬೇತಿ ಕೇಂದ್ರದ ಹೆಡ್ ಕಾನ್ಸ್ಟೇಬಲ್ ಬಿ.ಕೆ. ಗುರುಮೂರ್ತಿ, ಪೊಲೀಸ್ ಠಾಣೆಯ ಪಿಎಸ್‌ಐ ಎನ್.ರಾಮಚಂದ್ರ, ಹುತಾತ್ಮ ಯೋಧರ ಕುಟುಂಬಸ್ಥರಾದ ಕಮಲಮ್ಮ, ಸುರೇಶ್ ಬಾಬು, ವಾಣಿ, ಅಶ್ವಥ್ ಹಾಗೂ ಗ್ರಾಮಸ್ಥರು ಇದ್ದರು.