ಮಡಿಕೇರಿ, ಜು. ೧೨: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರು ಹೊಸ ಅನುಭವಕ್ಕೆ ಸಾಕ್ಷಿಯಾಗುತ್ತಿದೆ. ವಾಡಿಕೆಯಂತೆ ಈ ವೇಳೆಗೆ ಅದರಲ್ಲೂ ಕಕ್ಕಡ (ಆಟಿ) ಮಾಸ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಸಿಲಿನ ವಾತಾವರಣ ಕಾಣುತ್ತಿರುವುದು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಎದುರಾಗಿರಲಿಲ್ಲ. ಈ ವೇಳೆಗೆ ಕೊಡಗು ಮುಂಗಾರಿನ ಆರ್ಭಟಕ್ಕೆ ತತ್ತರಿಸುವಂತಿರುತ್ತಿತ್ತು. ಆದರೆ, ಪ್ರಾಕೃತಿಕವಾದ ಏರುಪೇರು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಗಂಭೀರ ಪರಿಸ್ಥಿತಿಯ ಆತಂಕಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಜೂನ್ ತಿಂಗಳು ಪೂರ್ಣಗೊಂಡಿದ್ದು, ಜುಲೈ ಎರಡನೇ ವಾರವೂ ಮುಕ್ತಾಯಗೊಳ್ಳುತ್ತಿದೆ. ಆದರೂ ಭತ್ತದ ಕೃಷಿಚಟುವಟಿಕೆಗಳಿಗೆ ವೇಗ ದೊರೆತಿಲ್ಲ. ಬಹುತೇಕ ಗದ್ದೆಗಳಲ್ಲಿ ನೀರಿಲ್ಲದೆ ಬಿತ್ತನೆ ಕಾರ್ಯಕ್ಕೆ ಸಂಕಷ್ಟ ಕಂಡುಬAದಿದೆ.
ಕೆಲವು ಉತ್ಸಾಹಿ ರೈತರು ಮಾತ್ರ ಕೆರೆನದಿಗಳ ನೀರನ್ನು ಬಳಸಿ ಬಿತ್ತನೆ ಮಾಡಿರುವುದನ್ನು ಹೊರತುಪಡಿಸಿದರೆ ಇತರೆಡೆಗಳಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಅಬ್ಬರಿಸುತ್ತಿದ್ದ ಆರಿದ್ರಾ ಮಳೆ ನಕ್ಷತ್ರ ಮುಗಿದು ಇದೀಗ ಪುನರ್ವಸು ಮಳೆಯ ಸನ್ನಿವೇಶವಿದೆ. ಆರಂಭಿಕ ಮೂರುದಿನ ಒಂದಷ್ಟು ರಭಸ ತೋರಿದ್ದ ಪುನರ್ವಸು ಕೂಡ ಈ ಬಾರಿ ಕ್ಷೀಣಗೊಂಡAತಿದೆ. ಕಳೆದ ವರ್ಷ ಮೇ ಕೊನೆಯ ವಾರಕ್ಕೂ ಮೊದಲೇ ಜಿಲ್ಲೆಯಲ್ಲಿ ಮುಂಗಾರು ಆರಂಭಗೊAಡಿದ್ದು, ನಿರಂತರ ಮಳೆಗೆ ಜನರು ಹೈರಾಣಾಗಿದ್ದರು. ಆದರೆ, ಈ ಬಾರಿ ಮಳೆಗಾಗಿ ಕಾಯುವಂತಾಗಿರುವುದು ಪ್ರಕೃತಿಯಲ್ಲಿನ ಅಸಮತೋಲನವನ್ನು ಜನತೆಗೆ ಅರಿವಾಗಿಸುತ್ತಿದೆ.
ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಈ ಬಾರಿ ಭತ್ತದ ಕೃಷಿ ತೀರಾ ಹಿನ್ನಡೆ ಕಾಣುವುದು ಖಚಿತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭತ್ತದ ಫಸಲು ಬೆಳೆಯುವ ಗುರಿಯಲ್ಲೂ ನಾಲ್ಕು ಸಾವಿರ ಹೆಕ್ಟೇರ್ನಷ್ಟು ಕಡಿಮೆ ವಿಸ್ತೀರ್ಣದ ಅಂದಾಜು ಮಾಡಲಾಗಿತ್ತು. ಏಕೆಂದರೆ ಕಳೆದ ವರ್ಷದಲ್ಲಿದ್ದ ೨೩ ಸಾವಿರ ಹೆಕ್ಟೇರ್ ಗುರಿಯಲ್ಲಿ ಕೇವಲ ೧೯ ಸಾವಿರ ಹೆಕ್ಟೇರ್ನಷ್ಟು ಮಾತ್ರ ಗುರಿ ಸಾಧನೆಯಾಗಿತ್ತು. ಇದರಿಂದಾಗಿ ಈ ಬಾರಿ ಕೃಷಿ ಇಲಾಖೆ ಮೂಲಕ ಅಂದಾಜು ಮಾಡಲಾಗಿದ್ದ ಗುರಿಯೇ ೪ ಸಾವಿರ ಹೆಕ್ಟೇರ್ ಕಡಿಮೆಯಿದೆ. ಇದೀಗ ವಾತಾವರಣದ ಅಸಹಜತೆ ಮಳೆಯ ಕೊರತೆಯಿಂದಾಗಿ ಭತ್ತದ ಕೃಷಿ ತೀರಾ ಕುಂಠಿತವಾಗುವ ಸಾಧ್ಯತೆ ಹೆಚ್ಚಿದೆ.
ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ ೬೦ ಇಂಚುಗಳಷ್ಟು ಕಡಿಮೆ ಮಳೆ ಈ ತನಕದ ಅವಧಿಯಲ್ಲಾಗಿದೆ. ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿ ಎಲ್ಲವೂ ಆಯಾ ಕಾಲಕ್ಕೆ ತಕ್ಕಂತೆ ನಡೆದರಷ್ಟೇ ಸಕಾರಾತ್ಮಕವಾಗಿರುತ್ತದೆ. ಇಲ್ಲದಿದ್ದಲ್ಲಿ ಎಲ್ಲವೂ ಡೋಲಾಯಮಾನವಾಗುವುದು ಸಹಜ. ಈಗಾಗಲೇ ಹಲವು ಕೃಷಿಕರು ಭತ್ತದ ಕೃಷಿ ಮಾಡುವ ವಿಚಾರದಲ್ಲಿ ಗೊಂದಲದಿAದಿದ್ದಾರೆ.
ಜಿಲ್ಲೆಗೆ ಎಷ್ಟೇ ಮಳೆಯಾದರೂ ಇಲ್ಲಿನ ಭೂಗರ್ಭದಲ್ಲಿ ಜಲದ ಬುಗ್ಗೆ ಎದ್ದರಷ್ಟೆ ವರ್ಷದುದ್ದಕ್ಕೂ ನೀರಿಗೆ ಸಮಸ್ಯೆಯಾಗದು. ಆದರೆ, ಈ ಬಾರಿ ಜುಲೈ ಮೂರನೇ ವಾರವಾದರಾದರೂ ಜಲ ಏಳದಂತಹ ಸನ್ನಿವೇಶ ಕಂಡುಬAದಿರುವುದು ಮುಂದಿನ ದಿನಗಳಲ್ಲಿ ಎದುರಾಗಬಹುದಾದದ ಸಂಭವನೀಯ ನೀರಿನ ಕೊರತೆಯ ಆತಂಕಕ್ಕೂ ಕಾರಣವಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ವರ್ಷದ ಹಲವು ತಿಂಗಳುಗಳು ಮಳೆಯೇ ಅಧಿಕವಾಗಿರುವುದು ಹಿಂದಿನ ವರ್ಷಗಳ ಅನುಭವವಾಗಿರುವುದರಿಂದ ಉಳಿದಿರುವ ಸಮಯದಲ್ಲಾದರೂ ಮಳೆಯಾಗಿ ಸಮಸ್ಯೆ ಎದುರಾಗದು ಎಂಬ ಆಶಾಭಾವನೆ ಜನತೆಯದ್ದಾಗಿದೆ.