ಮಡಿಕೇರಿ, ಜು. ೧೨: ಭಾರತೀಯ ಸಂಗೀತ ಲೋಕದ ಗಾನ ಕೋಗಿಲೆ ಎಸ್. ಜಾನಕಿ ಅವರು. ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಗೆ ಭೇಟಿ ನೀಡಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲು ಅವರು ಕೊಡಗಿಗೆ ಆಗಮಿಸಿದ್ದರು.
ಮಡಿಕೇರಿಯಲ್ಲಿ ರಾಷ್ಟಿçÃÃಯ ಔಷಧಿ ವ್ಯಾಪಾರಸ್ಥರ ಸಂಘದ ಸಂಘಟನಾ ಕಾರ್ಯದರ್ಶಿ ಎ.ಕೆ. ಜೀವನ್ ಅವರ ತೋಟದ ಮನೆಯಲ್ಲಿ ೨೦೧೫ರ ಏಪ್ರಿಲ್ ತಿಂಗಳಲ್ಲಿ ಎಂಟು ದಿನಗಳ ಕಾಲ ಎಸ್. ಜಾನಕಿ ಅವರು ವಾಸ್ತವ್ಯ ಹೂಡಿದ್ದರು. ಕೊಡಗಿನ ಸುಂದರ ಪ್ರಕೃತಿಯ ನಡುವೆ ಅವರು ವಿವಿಧ ಹಾಡುಗಳನ್ನು ಹಾಡುತ್ತಾ ಸಮಯ ಕಳೆದಿದ್ದರು ಎಂದು ಜೀವನ್ ಸ್ಮರಿಸಿಕೊಂಡರು.
ಕೊಡಗಿನ ಸುಂದರ ನಿಸರ್ಗದ ಮಡಿಲಲ್ಲಿ ಆ ಸರಸ್ವತಿಯ ಗಾನಾರಾಧನೆಯಲ್ಲಿ ತೊಡಗಿರುವುದು ನನ್ನ ಭಾಗ್ಯ ಎಂದು ಜಾನಕಿ ಅವರು ಹೇಳಿದ್ದ ಮಾತುಗಳನ್ನು ಜೀವನ್ ನೆನಪಿಸಿಕೊಂಡರು.
ಕನ್ನಡ ನಾಡಿನ ಜೀವನದಿ ಕಾವೇರಿ ಕುರಿತು ತಾವು ಹಲವು ಹಾಡುಗಳನ್ನು ಹಾಡಿದ್ದು, ಅವು ಜನಪ್ರಿಯವಾಗಿವೆ. ಆದರೆ ಇಂತಹ ಮಹಾಮಾತೆ ಕಾವೇರಿಯ ಬಗ್ಗೆ ಹಾಡಿದ ಬಳಿಕ ಆಕೆಯ ಉಗಮಸ್ಥಳವನ್ನು ದರ್ಶಿಸದೆ ಇರಲು ಸಾಧ್ಯವಿಲ್ಲ ಎಂಬ ಭಾವನೆಯಿಂದ ತಲಕಾವೇರಿಗೆ ಬಂದಿರುವುದಾಗಿ ಜಾನಕಿ ಅವರು ವಿನಮ್ರವಾಗಿ ಹೇಳಿದ್ದರು ಎಂದು ಅವರು ತಿಳಿಸಿದರು.
ಅತ್ಯಂತ ಸರಳ ಸ್ವಭಾವದವರಾಗಿದ್ದ ಎಸ್. ಜಾನಕಿ ಅವರು ತಮ್ಮ ಅಪಾರ ಖ್ಯಾತಿಯ ನಡುವೆಯೂ ಯಾವುದೇ ಅಹಂ ಇಲ್ಲದೆ ಸಾಮಾನ್ಯರಂತೆ ಬದುಕಿದ್ದರು. ಮನೆಯಲ್ಲಿ ಇದ್ದ ದಿನಗಳಲ್ಲಿ ಬೆಳಿಗ್ಗೆ ಇಡ್ಲಿ, ಮಧ್ಯಾಹ್ನ ಅನ್ನ-ಸಾರು ಹಾಗೂ ರಾತ್ರಿ ಫಲ ಆಹಾರ ನೀಡಿದರೆ ಸಾಕು, ತನಗಾಗಿ ವಿಶೇಷ ಅಡುಗೆ ಮಾಡಬೇಡಿ ಎಂದು ಹೇಳುತ್ತಿದ್ದರು ಎಂದು ಜೀವನ್ ಹೇಳಿದರು.
ಅವರು ಮನೆಯಲ್ಲಿದ್ದಷ್ಟು ದಿನ ಸಂಗೀತದ ಲೋಕದಲ್ಲೇ ತೇಲಿದ ಅನುಭವವಾಗಿತ್ತು. ತಮ್ಮ ಮಗಳಿಗೂ ಕೆಲವು ಹಾಡುಗಳನ್ನು ಹೇಳಿಕೊಟ್ಟಿದ್ದರು. ಇಂತಹ ಮೇರು ಗಾಯಕಿಯೊಂದಿಗೆ ಒಂದು ವಾರಕ್ಕೂ ಹೆಚ್ಚು ಕಾಲ ಕಳೆದದ್ದು ಜೀವನದ ಅತ್ಯಂತ ದೊಡ್ಡ ಭಾಗ್ಯ ಎಂದು ಸುಮಾಜೀವನ್ ಭಾವುಕರಾಗಿ ಸ್ಮರಿಸಿದರು.