ಕಣಿವೆ, ಜು. ೧೨: ಕಳೆದ ವರ್ಷದ ಈ ವೇಳೆ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಆದರೆ, ಈ ಬಾರಿ ಜುಲೈ ಅರ್ಧ ಮಾಸ ಕಳೆಯುತ್ತಾ ಬಂದರೂ ಜಲಾಶಯ ಭರ್ತಿಯಾಗಲಿಲ್ಲ. ಹಾಗಾಗಿ ಹಾರಂಗಿ ಜಲಾಶಯದ ನೀರನ್ನು ನಂಬಿರುವ ಕೃಷಿಕರು ಮಳೆ ಸುರಿಸಿ ಜಲಾಶಯವನ್ನು ಭರ್ತಿ ಮಾಡೆಂದು ಪುನರ್ವಸು ಹಾಗೂ ಪುಷ್ಯೆಯರ ಧ್ಯಾನದಲ್ಲಿ ನಿರತರಾಗಿದ್ದಾರೆ. ಕಳೆದ ವರ್ಷ ಹಾರಂಗಿ ಜಲಾಶಯ ಜುಲೈ ಮೊದಲ ವಾರದಲ್ಲಿ ಭರ್ತಿಯಾದ್ದರಿಂದ ಹಾರಂಗಿ ಅಚ್ಚುಕಟ್ಟು ರೈತರು ಬಹಳಷ್ಟು ಸಂತಸದಿAದ ಭತ್ತದ ಬೀಜೋಪಚಾರದಲ್ಲಿ ನಿರತರಾಗಿದ್ದರು.

ಆದರೆ ಈ ಬಾರಿ ಮಳೆ ನಾಡು ಕೊಡಗಿಗೂ ಬರ ಬಡಿದಂತೆ ಭಾಸವಾಗುತ್ತಿದೆ. ಕುಶಾಲನಗರ ತಾಲೂಕಿನ ಅರೆನೀರಾವರಿ ಪ್ರದೇಶದ ಬಹಳಷ್ಟು ಗ್ರಾಮಗಳಲ್ಲಿ ಈ ಬಾರಿ ಮಳೆಗಾಲದ ವಾತಾವರಣವೇ ಕಂಡುಬರುತ್ತಿಲ್ಲ. ಭೂಮಿಯ ದಾಹ ನೀಗಿಸುವಷ್ಟು ಮಳೆ ಆಗಲಿಲ್ಲ.

ಈ ತಿಂಗಳ ಜುಲೈ ೦೬ ರಿಂದ ಜುಲೈ ೧೯ ರವರೆಗೂ ಪುನರ್ವಸು ಮಳೆ ಮುಂದುವರೆದಿದೆಯಾದರೂ ಇದುವರೆಗೂ ಈ ಮಳೆ ರೈತರ ಪಾಲಿಗೆ ಯಾವುದೇ ಪರಿಣಾಮ ಬೀರಲಿಲ್ಲ. ಬಿಸಿಲು ಮಳೆಯಾಟದೊಂದಿಗೆ ಪುನರ್ವಸು ತನ್ನ ಅವಧಿ ಪೂರೈಸುವಂತೆ ಕಾಣುತ್ತಿದೆ. ಇನ್ನೂ ಜುಲೈ ೨೦ ರಿಂದ ಆಗಸ್ಟ್ ೩ ರವರೆಗೆ ಪುಷ್ಯ ಮಳೆಯ ಸರದಿ ಇದೆ. ಹಾಗೆಯೇ ಕುಶಾಲನಗರದ ನದಿಯಂಚಿನ ಜನರೂ ಸೇರಿದಂತೆ ಕಾವೇರಿ ನದಿ ತಗ್ಗು ಪ್ರದೇಶಗಳ ಜನರಲ್ಲಿ ಆತಂಕ ಮೂಡಿಸುತ್ತಿದ್ದ ಆಶ್ಲೇಷಾ ಮಳೆ ಆಗಸ್ಟ್ ೩ ರಿಂದ ೧೭ ರವರೆಗೆ ಇದೆಯಾದರೂ ಈಗಾಗಲೇ ಗತಿಸಿರುವ ಮಳೆಗಳು ಹಾಗೂ ಚಾಲ್ತಿಯಲ್ಲಿರುವ ಮಳೆಯ ಸ್ಥಿತಿಗತಿಗಳನ್ನು ಅವಲೋಕಿಸಿದರೆ ಈ ಬಾರಿ ನಿಜಕ್ಕೂ ಬರಗಾಲ ಕಾಡಲಿದೆಯಾ ಎಂಬ ಆತಂಕ ರೈತರನ್ನು ಆವರಿಸಿದೆ.

ಅಪೂರ್ಣ ಕಾಮಗಾರಿ

ಈಗಾಗಲೇ ಒಂದು ಕೋಟಿ ರೂಗಳ ವೆಚ್ಚದಲ್ಲಿ ಹಮ್ಮಿಕೊಂಡಿದ್ದ ಹಾರಂಗಿ ಮುಖ್ಯ ಕಾಲುವೆ ಹಾಗೂ ಉಪಕಾಲುವೆಗಳ ಕಾಮಗಾರಿ ಅಪೂರ್ಣಗೊಂಡಿದೆ. ಸರ್ಕಾರದಿಂದ ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿಯಾಗದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ.

ಜೊತೆಗೆ ಕಾರ್ಮಿಕರಿಗೆ ವೇತನ ಸಿಗದ ಕಾರಣ ಕಾಲುವೆ ಕೆಲಸಗಳನ್ನು ಬಿಟ್ಟು ಅವರ ಊರುಗಳಿಗೆ ಮರಳಿರುವ ಮಾಹಿತಿ ‘ಶಕ್ತಿ’ಗೆ ಲಭಿಸಿದೆ. ಕಾಮಗಾರಿ ಅಪೂರ್ಣವಾಗಿರುವುದು ಒಂದೆಡೆಯಾದರೆ, ಜಲಾಶಯವೂ ಈ ಬಾರಿ ಭರ್ತಿಯಾಗದಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ. ಒಂದು ವೇಳೆ ಮಳೆ ಸುರಿದು ಜಲಾಶಯಕ್ಕೆ ದಿಢೀರನೇ ನೀರು ಬಂದು ಭರ್ತಿಯಾದಲ್ಲಿ ಖಾರೀಫ್ ಬೆಳೆಗೆ ನೀರು ಹರಿಸಬೇಕಿರುವ ಕಾರಣ ಅಪೂರ್ಣಗೊಂಡು ಅರ್ಧಂಬರ್ಧವಾಗಿರುವ ಕಾಲುವೆಗಳಲ್ಲಿ ಹೇಗೆ ನೀರು ಹರಿಸುವುದು ಎಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ.

ರೈತರ ಅಸಮಾಧಾನ

ಹಾರಂಗಿ ಮುಖ್ಯ ಕಾಲುವೆ ಹಾಗೂ ಉಪಕಾಲುವೆಗಳ ಕಾಮಗಾರಿ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಜಲಾಶಯದಿಂದ ನೀರನ್ನು ಹೇಗೆ ಹರಿಸುತ್ತಾರೆ ಎಂಬುದು ಅಚ್ಚುಕಟ್ಟು ಪ್ರದೇಶದ ರೈತರ ಪ್ರಶ್ನೆಯಾಗಿದ್ದು, ಕೂಡಲೇ ಅಧಿಕಾರಿಗಳು ಕಾಮಗಾರಿಯನ್ನು ಪೂರ್ಣಗೊಳಿಸಬೇಕು.

ಹಾರಂಗಿ ಜಲಾಶಯ ಭರ್ತಿಯಾಗದಿದ್ದಲ್ಲಿ ಕೊಡಗಿನ ಕೃಷಿಕರಿಗೆ ಕಡೆಗೆ ಶಿರಂಗಾಲದವರೆಗಾದರೂ ಲಭ್ಯವಿರುವ ನೀರನ್ನು ಹರಿಸಬೇಕೆಂದು ಅಚ್ಚುಕಟ್ಟು ಪ್ರದೇಶ ಹುಲುಸೆ ಗ್ರಾಮದ ಕೃಷಿಕರಾದ ಸದಾಶಿವ, ಮಲ್ಲಿಕಾ, ಸಂಪತ್ತು, ವಿಶ್ವ, ರಾಕೇಶ್ ಮುಂತಾದವರು ಆಗ್ರಹಿಸಿದ್ದಾರೆ.

ವರದಿ : ಕೆ.ಎಸ್. ಮೂರ್ತಿ