ಮಡಿಕೇರಿ, ಜು. ೧೬: ಅಮೆರಿಕದ ಪ್ರವಾಸಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬAಧ ಹೋಂಸ್ಟೇ ಮಾಲೀಕರನ್ನು ಬಂಧಿಸಿದ್ದು ಅಕ್ರಮ ಎಂದು ಆದೇಶಿಸಿರುವ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಮಾಲೀಕರಿಗೆ ರೂ.೫ ಲಕ್ಷ ಪರಿಹಾರವಾಗಿ ನೀಡುವಂತೆಯೂ ಸರಕಾರಕ್ಕೆ ಆದೇಶಿಸಿದೆ. ಏಪ್ರಿಲ್ ತಿಂಗಳಿನಲ್ಲಿ ಕುಟ್ಟದ ದೇವಿ ವಿಲ್ಲಾ ಹೋಂ ಸ್ಟೇಯಲ್ಲಿ ಅಲ್ಲಿಗೆ ಆಗಮಿಸಿದ್ದ ಅಮೇರಿಕಾದ ಮಹಿಳೆಯ ಮೇಲೆ ಅಲ್ಲಿನ ಅಡುಗೆ ಸಿಬ್ಬಂದಿ ಜಾರ್ಖಂಡ್ ಮೂಲದ ವ್ಯಕ್ತಿ ಅತ್ಯಾಚಾರ ಎಸಗಿದ ಆರೋಪದಡಿ ಬಂಧನಕ್ಕೊಳಗಾಗಿದ್ದ. ಹೋಂ ಸ್ಟೇ ಮಾಲಿಕರಾದ ವಿಶಾಲ್ ಅವರ ಮೇಲೆಯೂ ಪ್ರಕರಣ ದಾಖಲಾಗಿ ಅವರನ್ನೂ ಬಂಧಿಸಲಾಗಿತ್ತು.

ಪ್ರಕರಣ ಸಂಬAಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಹಾಗೂ ತಮಗೆ ಉದ್ಯಮದಲ್ಲಿ ಆದ ನಷ್ಟಕ್ಕೆ ಪರಿಹಾರವಾಗಿ ರೂ.೧೫ ಲಕ್ಷ ಪರಿಹಾರವನ್ನು ಕೋರಿ ಹೋಂಸ್ಟೇ ಮಾಲೀಕ ವಿಶಾಲ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, “ಘಟನೆ ಸಂದರ್ಭ ಅರ್ಜಿದಾರರು ಸ್ಥಳದಲ್ಲಿರಲಿಲ್ಲ. ವಿದೇಶಿ ರಾಯಭಾರಿ ಕಚೇರಿಯಿಂದ ದೂರು ಬಂದಿದೆ ಎಂಬ ಏಕಮಾತ್ರ ಕಾರಣಕ್ಕೆ ಭಾರತೀಯ ನಾಗರಿಕನ ಹಕ್ಕನ್ನು ಕಸಿದು ಕಾನೂನಿಗೆ ವಿರುದ್ಧವಾಗಿ ಬಂಧನ ಮಾಡುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿತು. “ಅರ್ಜಿದಾರರು ೫ ಲಕ್ಷ ರೂ. ಪರಿಹಾರಕ್ಕೆ ಅರ್ಹರಾಗಿದ್ದಾರೆ. ಆದೇಶದ ಪ್ರತಿ ಸ್ವೀಕರಿಸಿದ ೪ ವಾರಗಳಲ್ಲಿ ರಾಜ್ಯ ಸರಕಾರವು ಅರ್ಜಿದಾರರಿಗೆ ಪರಿಹಾರ ಪಾವತಿಸಬೇಕು ಎಂದು ಆದೇಶ ನೀಡಿದೆ.