ಮಡಿಕೇರಿ, ಜು. ೧೬: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಮತದಾರರ ಹಾಗೂ ಬಿಎಲ್ಓ ನೆರವು ಕೇಂದ್ರಗಳ ಸಂಖ್ಯೆಯನ್ನು ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಹೆಚ್ಚಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಉಪಾಧ್ಯಕ್ಷ ಹಾಗೂ ಎಸ್ಐಆರ್ ಕಾರ್ಯಕ್ರಮದ ಉಸ್ತುವಾರಿ ವಿ.ಆರ್. ಸುದರ್ಶನ್ ಒತ್ತಾಯಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ೩೦,೩೭೩ ಮತದಾರರ ನೆರವು ಕೇಂದ್ರಗಳು ಹಾಗೂ ೬,೬೫೧ ಬಿಎಲ್ಓ ನೆರವು ಕೇಂದ್ರಗಳಿದ್ದು, ಇವು ಸಾಕಾಗುತ್ತಿಲ್ಲ ಎಂದು ಹೇಳಿದರು. ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಅರ್ಜಿ ಪ್ರಕ್ರಿಯೆ ಸುಲಭಗೊಳಿಸಲು ನೆರವು ಕೇಂದ್ರಗಳನ್ನು ಗ್ರಾಮ ಹಾಗೂ ಹೋಬಳಿಮಟ್ಟದಲ್ಲಿ ಹೆಚ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ದೇಶಕ್ಕೆ ಹೊಸ ಪ್ರಕ್ರಿಯೆಯಲ್ಲ. ೧೯೫೧ರಲ್ಲಿ ಮೊದಲ ಬಾರಿಗೆ ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ದೇಶದಲ್ಲಿ ಹಲವು ಬಾರಿ ಪರಿಷ್ಕರಣೆ ನಡೆದಿದೆ. ಆದರೆ, ಈ ಬಾರಿ ಅನಗತ್ಯ ಗೊಂದಲ ಮತ್ತು ಆತಂಕ ಸೃಷ್ಟಿಸಲಾಗುತ್ತಿದೆ. ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಅಲೆಮಾರಿ ಸಮುದಾಯದ ನೈಜ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ಕಾಂಗ್ರೆಸ್ನ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಂವಿಧಾನ ಹಾಗೂ ಸಂಸದೀಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಂಟು ತಿಂಗಳ ಹಿಂದೆಯೇ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಸುಮಾರು ೮೦ ಸಾವಿರ ಬೂತ್ಮಟ್ಟದ ಏಜೆಂಟ್ಗಳನ್ನು (ಬಿಎಲ್ಎ) ನೇಮಿಸಲಾಗಿದೆ. ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕರ್ತರಿಗೆ ತರಬೇತಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ವೇಳೆ ಬಿಎಲ್ಓಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳ ಪಟ್ಟಿ ಲಭ್ಯವಿರದಿರುವುದು ಗಮನಕ್ಕೆ ಬಂದಿದೆ. ಇಂತಹ ಸಮಸ್ಯೆಗಳು ಹಲವು ಕಡೆ ಕಂಡುಬರುತ್ತಿದ್ದು, ನೆರವು ಕೇಂದ್ರಗಳ ಅಗತ್ಯ ಮತ್ತಷ್ಟು ಸ್ಪಷ್ಟವಾಗಿದೆ. ಬಿಎಲ್ಓಗಳ ಕಾರ್ಯಕ್ಕೆ ಪಕ್ಷದ ಬಿಎಲ್ಎಗಳು ಅಗತ್ಯ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಭೌಗೋಳಿಕ ಪರಿಸ್ಥಿತಿ ಮತ್ತು ಜನಹಿತವನ್ನು ಪರಿಗಣಿಸಿ ಎಸ್ಐಆರ್ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸಲಾಗಿದೆ. ಮತದಾರರು ನಿರ್ಲಕ್ಷ್ಯ ವಹಿಸದೆ ಜುಲೈ ೩೦ರೊಳಗೆ ತಮ್ಮ ವಿವರಗಳ ಪರಿಶೀಲನೆ ಹಾಗೂ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ಮತದಾರರ ಪಟ್ಟಿಗೆ ಸಂಬAಧಿಸಿದ ಸಮಸ್ಯೆಗಳು ಎದುರಾದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಕೀಲರ ತಂಡವನ್ನು ರಚಿಸಿ ಸಾರ್ವಜನಿಕರಿಗೆ ಕಾನೂನು ನೆರವು ಒದಗಿಸುವ ಯೋಜನೆ ರೂಪಿಸಲಾಗಿದೆ. ನೈಜ ಮತದಾರರ ಹಕ್ಕು ಕಸಿದುಕೊಳ್ಳದಂತೆ ಕಾಂಗ್ರೆಸ್ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸುದರ್ಶನ್ ಹೇಳಿದರು.
ವಾಸ ದೃಢೀಕರಣ ಪತ್ರವನ್ನು ನಿಯಮಾನುಸಾರ ಪರಿಶೀಲಿಸಿ ತಹಶೀಲ್ದಾರ್ ಮೂಲಕ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಈ ಕುರಿತು ವಿನಾಕಾರಣ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಎಸ್ಐಆರ್ ಅರ್ಜಿಯಲ್ಲಿ ಹಲವು ತಾಂತ್ರಿಕ ಗೊಂದಲಗಳಿದ್ದು, ಸಾಮಾನ್ಯ ಮತದಾರರಿಗೆ ಅರ್ಜಿ ಸಮರ್ಪಕವಾಗಿ ಭರ್ತಿ ಮಾಡುವುದು ಕಷ್ಟವಾಗಿದೆ ಎಂದು ಆರೋಪಿಸಿದರು. ೨೦೦೨ರ ಎಸ್ಐಆರ್ ದಾಖಲೆಗಳಲ್ಲಿರುವ ಮಾಹಿತಿಯನ್ನೇ ನಮೂದಿಸುವಂತೆ ಸೂಚಿಸಿರುವುದು ಹಾಗೂ ಕ್ಷೇತ್ರ ಪುನರ್ವಿಂಗಡಣೆಯಿAದ ಕ್ಷೇತ್ರ ಸಂಖ್ಯೆಗಳು ಬದಲಾಗಿರುವ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿದೆ. ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸರಳೀಕರಣದ ಕೊರತೆಯಿಂದ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಅವರು ದೂರಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಎಸ್ಐಆರ್ ಉಸ್ತುವಾರಿ ಹೆಚ್.ಎಸ್. ಚಂದ್ರಮೌಳಿ, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಎಸ್ಐಆರ್ ವಾರ್ ರೂಂ ಸಂಚಾಲಕ ತೆನ್ನೀರ ಮೈನಾ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವನ್ ಕೊತ್ತೋಳಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಲ್ಯದ ಗಿರೀಶ್ ಹಾಜರಿದ್ದರು.