ವೀರಾಜಪೇಟೆ, ಜು. ೧೯: ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ಪ್ರತಿಯೊಬ್ಬರಿಗೂ ದೇವರು ನೀಡಿರುವ ವರ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಡೊಮೆನಿಕ್ ಜೇಮ್ಸ್ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪ್ರತಿಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಮಗೆ ದೊರೆತ ಪ್ರತಿಭೆಗಳು ಮಹತ್ತರ ಮತ್ತು ಅಮೂಲ್ಯವಾಗಿರುವಂತದ್ದು. ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಬೇಕು. ತಮ್ಮಲ್ಲಿನ ಪ್ರತಿಭೆಯನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅವರು ಮಾತನಾಡಿ ಶಾಲಾ ಕಾಲೇಜುಗಳೆಂದರೆ ಕೇವಲ ಪಠ್ಯಪುಸ್ತಕಗಳ ಅಧ್ಯಯನ ಮಾತ್ರವಲ್ಲ. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬೇಕು. ನಿರಂತರ ಪ್ರಯತ್ನದಿಂದ ಜೀವನದಲ್ಲಿ ಗುರಿ ಮುಟ್ಟಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮದಲೈ ಮುತ್ತು ಅವರು ಮಾತನಾಡಿ, ಬದುಕಿನಲ್ಲಿ ಅಸಾಧ್ಯವೆಂಬುದಿಲ್ಲ. ಪ್ರತಿಯೊಬ್ಬರಲ್ಲು ಒಂದೊAದು ಬಗೆಯ ಪ್ರತಿಭೆಯಿದ್ದು, ಪ್ರತಿಯೊಬ್ಬರೂ ತಮ್ಮಲ್ಲಿನ ಪ್ರತಿಭೆಯ ಬಗ್ಗೆ ಅರಿವು ಹೊಂದಬೇಕು. ತಮ್ಮನ್ನು ಅರ್ಥೈಸಿಕೊಳ್ಳುವ ಮೂಲಕ ನಿರಂತರ ಅಭ್ಯಾಸದಿಂದ ಗುರಿಮುಟ್ಟಬಹುದು ಎಂದರು. ಈ ಸಂದರ್ಭ ಕಾಲೇಜಿನ ಉಪನ್ಯಾಸಕರಾದ ಡಾ. ಹೇಮಂತ್ ಕುಮಾರ್, ಕ್ರಿಸ್ಟಿನಾ, ವಿವೇಕ್, ಕೃಷ್ಣರಾಜ್, ಜಹೀರ್, ಜೋಮನ್, ರಶ್ಮಿನ್ ಸೇರಿದಂತೆ ಎಲ್ಲ ಉಪನ್ಯಾಸಕರು, ಕಾಲೇಜಿನ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬ್ಯಾಗ್ ರಹಿತ ದಿನದ ಅಂಗವಾಗಿ ನಡೆದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ತರಗತಿಯ ವಿದ್ಯಾರ್ಥಿಗಳು ವೈವಿಧ್ಯಮಯ ಮತ್ತು ಆಕರ್ಷಕವಾದ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿ ಗಮನಸೆಳೆದರು.