ಶನಿವಾರಸಂತೆ, ಜು. ೧೯: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ಶನಿವಾರ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯಕ್ರಮ “ಸಂಭ್ರಮ ಶನಿವಾರ’’ (ಬ್ಯಾಗ್ ಲೆಸ್ ಡೇ ) ಅರ್ಥಪೂರ್ಣವಾಗಿ ಸಂಭ್ರಮದಿAದ ಆಚರಿಸಲ್ಪಟ್ಟಿತು.
‘’ಮಾದಕ ವಸ್ತುಗಳ ದುರುಪಯೋಗ ಮತ್ತು ತಡೆಗಟ್ಟುವಿಕೆ ‘’ ಎಂಬ ವಿಷಯಾಧಾರದ ಕಾರ್ಯಕ್ರಮವನ್ನು ಉದ್ಘಾಟಿಸಿದ ಶನಿವಾರಸಂತೆ ಪೊಲೀಸ್ ಠಾಣೆ ಎಎಸ್ಐ ವಿವೇಕ್ ಮಾತನಾಡಿ, ಡ್ರಗ್ಸ್ ಎಂದರೇನು..? ಉಪಯುಕ್ತ ಮತ್ತು ನಿಷೇಧಿತ ಡ್ರಗ್ಸ್ ಗಳು ಯಾವುವು ಎಂಬ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಹೆಡ್ಕಾನ್ಸ್ಟೇಬಲ್ ವೀಣಾ ಮಾತನಾಡಿ, ದುಶ್ಚಟಕ್ಕೆ ಬಲಿಯಾದ ಯುವಕರಿಂದ ವಿದ್ಯಾರ್ಥಿನಿಯರು ಹೇಗೆ ಎಚ್ಚರ ವಹಿಸಬೇಕು…ಕುಟುಂಬದಲ್ಲಿ ತಂದೆ, ಅಣ್ಣ-ತಮ್ಮಂದಿರನ್ನು ದುಶ್ಚಟದಿಂದ ಮುಕ್ತರನ್ನಾಗಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ಧರಣೀಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ದುಷ್ಕೃತ್ಯಗಳ ಬಗ್ಗೆ ಅರಿವು ಮೂಡಿಸಿದರು.
ಶಿಕ್ಷಕ ಕೆ.ಪಿ.ಜಯಕುಮಾರ್ ಮಾತನಾಡಿ, ಇಂದು ಸಮಾಜದಲ್ಲಿ ಯುವ ಪೀಳಿಗೆಯ ಅಧೋಗತಿಗೆ ದುಶ್ಚಟಗಳೇ ಕಾರಣವಾಗಿದ್ದು ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ದುಶ್ಚಟಮುಕ್ತ ಶಿಕ್ಷಣ ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕಿ ಸುಚಿತ್ರಾ ವಹಿಸಿದ್ದರು. ಆರೋಗ್ಯ ಅಧಿಕಾರಿ ಸರಸ್ವತಿ, ಆಶಾ ಕಾರ್ಯಕರ್ತೆಯರಾದ ರೂಪಾ, ಮಂಗಳಾ, ಶಿಕ್ಷಕರಾದ ಸವಿತಾ, ಶ್ರೀಕಲಾ, ಸಂದೇಶ್ ಹಾಜರಿದ್ದರು. ಶಿಕ್ಷಕ ಅಂಜನಪ್ಪ ಕಾರ್ಯಕ್ರಮ ನಿರ್ವಹಿಸಿದರು.