ಕಣಿವೆ, ಜು. ೨೩: ಕಳೆದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಧರೆಯನ್ನು ಸುಡುವ ಬೇಸಗೆಯ ನಡುವೆಯೂ ಭೂಮಿಯ ಅಂತಸತ್ವವನ್ನು ಹೀರಿ ಬೆಳೆದು ನಿಂತ ಮಾವು, ನೇರಳೆ ಹಾಗೂ ಹಲಸುಗಳು ಈ ಬಾರಿ ಭರಪೂರ ಫಸಲು ಬಿಟ್ಟಾಗ ಹಳ್ಳಿಯ ಜನ ಈ ಬಾರಿ ಬರಗಾಲವನ್ನು ಆಹ್ವಾನಿಸಲು ಈ ಹಣ್ಣುಗಳು ಇಷ್ಟೊಂದು ಫಸಲು ಬಿಟ್ಟಿವೆ ನೋಡಿ ಎನ್ನುತ್ತಿದ್ದರು. ಕಾಕತಾಳೀಯ ಎಂಬAತೆ ಗ್ರಾಮೀಣ ಜನರ ಅನುಭವದ ಮಾತು ನಿಜವಾಗುತ್ತಿದೆಯೇ...?
ಕಳೆದ ಮೇ ಮಾಸಾಂತ್ಯ, ಜೂನ್ ಮೃಗಶಿರಾ, ಆರ್ದ್ರಾ ಹಾಗೂ ಪುನರ್ವಸು ಮಳೆಗಳು ಮಳೆ ಸುರಿಸದೆ ಮೋಡಗಳನ್ನು ಸರಿಸಿ ಕೈಕೊಟ್ಟ ಪರಿಣಾಮ ಕೊಡಗಿನ ಪುಟ್ಟ ಜಲಾಶಯಗಳಾದ ಚಿಕ್ಲಿಹೊಳೆ ಹಾಗೂ ಹಾರಂಗಿ ಜಲಾಗಾರಗಳು ಭರ್ತಿಯಾಗಲೇ ಇಲ್ಲ.
ಇನ್ನು ಜುಲೈ ಮಾಸದ ಮೂರನೇ ವಾರದಲ್ಲಿ ಸುರಿಯಬೇಕಿದ್ದ ಪುಷ್ಯ ಮಳೆ ಕೂಡ ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಎಂಬ ಗಾದೆ ಮಾತಿನಂತೆ ಹಿಂದಿನ ಮಳೆಗಳ ಸಾಲಿನಲ್ಲಿಯೇ ಸೇರುವ ಮೂಲಕ ಬಿಸಿಲು-ಗಾಳಿಯೊಂದಿಗೆ ದಿನಗಳೆಯುತ್ತಿರುವುದು ಅನ್ನದಾತರಲ್ಲಿ ಆತಂಕ ಮೂಡಿಸಿದೆ. ಜುಲೈ ೨೦ ರಿಂದ ಆಗಸ್ಟ್ ೩ ರವರೆಗೂ ನಿಗದಿಯಾಗಿರುವ ಪುಷ್ಯ ಮಳೆ ವಾರ ಕಳೆದರೂ ಕೂಡ ತನ್ನ ಅಸ್ತಿತ್ವ ಸ್ಥಾಪಿಸದ ಕಾರಣ ಅನ್ನದಾತರಿಗೆ ತೀವ್ರ ನಿರಾಸೆ ಉಂಟಾಗಿದೆ.
ಕುಶಾಲನಗರ ತಾಲೂಕಿನ ಕೇವಲ ನಾಲ್ಕೇ ನಾಲ್ಕು ಗ್ರಾಮ ಪಂಚಾಯಿತಿಗಳ ೨೦ ಗ್ರಾಮಗಳ ಕೇವಲ ೫ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುತ್ತಿದ್ದ ಹಾರಂಗಿ ಜಲಾಶಯ ಈ ಬಾರಿ ಭರ್ತಿಯಾಗದಿರುವುದು ಈ ಭಾಗದ ರೈತಾಪಿಗಳ ಎದೆ ನಡುಗಿಸಿದೆ.
ಮೃಗಶಿರಾ, ಆರ್ದ್ರಾ ಕೈಕೊಟ್ಟರೂ ಪುನರ್ವಸು ಹಾಗೂ ಪುಷ್ಯ ಮಳೆಗಳು ಸುರಿದೇ ಸುರಿಯುತ್ತವೆ. ಅಂತರ್ಜಲ ವೃದ್ದಿಯಾಗುತ್ತದೆ. ಭೂಮಿ ಹಸಿರಾಗಿ ನಳ ನಳಿಸುತ್ತದೆ ಎಂಬ ಆಶಾ ಭಾವದೊಂದಿಗೆ ತಮ್ಮ ತಮ್ಮ ಹೊಲಗದ್ದೆಗಳಲ್ಲಿ “ಬರ ಅಗೆ” ( ನೀರಿನ ಗದ್ದೆಗಳನ್ನು ಹೊರತು ಪಡಿಸಿ ಹೊಲದಲ್ಲಿ ಬೀಜ ಬಿತ್ತಿ ನೀರು ಹರಿಸಿ ಸಿದ್ದ ಪಡಿಸುವ ಪೈರಿನ ಗದ್ದೆಗಳು) ಗಳನ್ನು ಸಿದ್ಧಪಡಿಸಿ ಭತ್ತದ ಬೀಜಗಳ ಬೀಜೋಪಚಾರದಲ್ಲಿ ನಿರತರಾದ ರೈತರು ಎಲ್ಲಿಂದಲೋ ನೀರು ತಂದು ಹಾಕಿಕೊಂಡು ಭತ್ತದ ಪೈರುಗಳನ್ನು ಸಿದ್ದಪಡಿಸಿಕೊಂಡು ದಿನವೂ ಮೋಡದತ್ತ ಮುಖ ತೊಟ್ಟು ಮಳೆ ಸುರಿಸೆಂದು ವರುಣನ ಬೇಡುತ್ತಿದ್ದಾರೆ.
ಆದರೆ ಏಕೋ ಏನೋ ಈ ಬಾರಿ ಯಾರು ಕೈಬಿಟ್ಟರೂ ನಾನು ಕೈ ಹಿಡಿಯುತ್ತೇನೆ ಎಂದು ಅನ್ನದಾತರಿಗೆ ಮಾತು ಕೊಟ್ಟ ಪುಷ್ಯ ಮಳೆಯೂ ಕೂಡ ಮಳೆ ಸುರಿಸದೇ ಖಾಲಿ ಮೋಡದೊಂದಿಗೆ ತೇಲುತ್ತಾ ಬಿಸಿಲ ಅನುಭವ ಮೂಡಿಸುತ್ತಿರುವ ಬಗೆ ನಿಜಕ್ಕೂ ವಿಪರ್ಯಾಸ. ತೊರೆನೂರು, ಶಿರಂಗಾಲ, ಹುಲುಸೆ, ಮದಲಾಪುರ, ಹುದುಗೂರು, ಮರೂರು, ಭುವನಗಿರಿ, ಸೀಗೆಹೊಸೂರು ಮೊದಲಾದ ಗ್ರಾಮಗಳಲ್ಲಿನ ರೈತರು ತಮಗೆ ತೋಚಿದ ಭತ್ತದ ತಳಿಯ ಬೀಜ ತಂದು ಒಗ್ಗು ಹಾಕಿ ಭತ್ತದ ಪೈರು ಸಿದ್ದ ಪಡಿಸಿ ನಾಟಿಗಾಗಿ ಗದ್ದೆಗಳ ಉಳುಮೆಗೆ ನೀರಿಗಾಗಿ ಕಾಯುತ್ತಿದ್ದಾರೆ. ಆದರೆ, ಜಲಾಶಯದಿಂದ ಈ ಬಾರಿ ಕುಡಿಯಲು ಮಾತ್ರ ನೀರು ಹರಿಸಲಾಗುತ್ತದೆ. ಬೆಳೆ ಬೆಳೆಯುವಂತಿಲ್ಲ ಎಂಬ ನೀರಾವರಿ ನಿಗಮದ ಸುತ್ತೋಲೆ ರೈತರ ನೆಮ್ಮದಿ ಕೆಡಿಸಿದೆ. ನೀರಾವರಿ ಸೌಲಭ್ಯ ಹೊಂದಿರುವ ಅರೆ ನೀರಾವರಿ ಪ್ರದೇಶಗಳ ಕೃಷಿಕರು ಕೂಡ ಈ ಬಾರಿ ಮಳೆಯೇ ಸುರಿಯದ ಅಂತರ್ಜಲವನ್ನು ನಂಬಿ ಭತ್ತ ಬೆಳೆಯುವ ಧೈರ್ಯಕ್ಕೆ ಮುಂದಾಗುತ್ತಿಲ್ಲ.
ಜಿಲ್ಲೆಯಲ್ಲಿ ಇರುವ ಜಲಾಶಯದಲ್ಲಿ ಪ್ರಸಕ್ತ ಸಂಗ್ರಹವಾಗಿರುವ ನೀರನ್ನು ಜಿಲ್ಲೆಯ ಶಿರಂಗಾಲದವರೆಗಿನ ಕೃಷಿಕರಿಗೆ ಮಾತ್ರ ಹರಿಸುವಂತಾಗಲಿ. ಕಣ್ಣೆದುರೇ ಜಲಾಶಯವಿದ್ದರೂ ನಾವು ಬೆಳೆ ಬೆಳೆಯಲಿಲ್ಲ ಎಂದರೆ ಏನರ್ಥ ?
ಕೊಡಗಿನ ಕೃಷಿಕರಿಗೆ ಲಭ್ಯವಿರುವ ನೀರು ಬಳಕೆಯಾಗಲಿ ಎಂಬುದು ಹೆಬ್ಬಾಲೆ, ತೊರೆನೂರು, ಶಿರಂಗಾಲ ಭಾಗದ ಕೃಷಿಕರ ವಾದವಾಗಿದೆ. ಜಿಲ್ಲಾಡಳಿತ, ಸರ್ಕಾರ ಹಾಗೂ ಜನಪ್ರತಿನಿಧಿಗಳು ಜಿಲ್ಲೆಯ ಕೇವಲ ಬೆರಳೆಣಿಕೆಯ ಭತ್ತ ಬೆಳೆಯುವ ಕೃಷಿಕರ ಮೊರೆಯನು ಆಲಿಸುವರೇ ಕಾದುನೋಡಬೇಕಿದೆ.
-ವರದಿ : ಕೆ.ಎಸ್. ಮೂರ್ತಿ