ಗೋಣಿಕೊಪ್ಪಲು, ಜು. ೨೩: ಸೇವಾ ಕಾರ್ಯದಲ್ಲಿ ಸದಾ ಮುಂದಿರುವ ಆಟೋ ಚಾಲಕರು ತಮ್ಮ ಆಟೋ ರಿಕ್ಷಾಗಳನ್ನು ಚಾಲನೆ ಮಾಡುವ ಸಂದರ್ಭ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ದಾಖಲೆ ಇಲ್ಲದ ಆಟೋ ರಿಕ್ಷಾಗಳನ್ನು ರಸ್ತೆಗೆ ಇಳಿಸಬಾರದು. ಈ ನಿಟ್ಟಿನಲ್ಲಿ ಗೋಣಿಕೊಪ್ಪ ಆಟೋ ಚಾಲಕ, ಮಾಲೀಕರಿಗೆ ಇಲಾಖೆ ವತಿಯಿಂದ ‘ಜಿಪಿಎಸ್’(ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಓಡಾಡಲು) ನಂಬರುಗಳನ್ನು ನೀಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಯಾವುದೇ ಕಾರಣಕ್ಕೂ ಜಿಪಿಎಸ್ ಇಲ್ಲದ ಆಟೋ ರಿಕ್ಷಾಗಳು ರಸ್ತೆಗಿಳಿಯುವಂತಿಲ್ಲ ಎಂದು ವೀರಾಜಪೇಟೆ ತಾಲೂಕಿನ ಡಿವೈಎಸ್ಪಿ ಮಹೇಶ್‌ಕುಮಾರ್ ರಿಕ್ಷಾ ಚಾಲಕರಿಗೆ ಹಾಗೂ ಮಾಲೀಕರಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಗೋಣಿಕೊಪ್ಪಲುವಿನ ಬಸ್ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ರಿಕ್ಷಾಗಳಿಗೆ ಜಿಪಿಎಸ್ ನಂಬರ್ ವಿತರಿಸಿ ಮಾತನಾಡಿದ ಅವರು, ಸಾರ್ವಜನಿಕ ಸೇವೆಯಲ್ಲಿ ಆಟೋ ಚಾಲಕರು ಮುಂಚೂಣಿಯಲ್ಲಿರುತ್ತಾರೆ. ಹೀಗಾಗಿ ಅಗತ್ಯ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಜಿಪಿಎಸ್ ಹೊಂದಿದ ಆಟೋ ರಿಕ್ಷಾಗಳನ್ನು ಪೊಲೀಸರು ಅಷ್ಟಾಗಿ ತಪಾಸಣೆಗೆ ಒಳಪಡಿಸುವುದಿಲ್ಲ. ಅಗತ್ಯವಿದ್ದಲ್ಲಿ ಮಾತ್ರ ತಪಾಸಣೆಗೆ ಒಳಪಡಿಸಲಾಗುತ್ತದೆ. ಗೋಣಿಕೊಪ್ಪಲುವಿನಲ್ಲಿ ೪೦೦ಕ್ಕೂ ಅಧಿಕ ಆಟೋ ರಿಕ್ಷಾಗಳಿದ್ದರೂ, ಸರಿಯಾದ ದಾಖಲೆ ಹೊಂದಿರುವ ಆಟೋ ರಿಕ್ಷಾಗಳು ಕೇವಲ ೭೧ ಇವೆ. ಉಳಿದ ಆಟೋ ರಿಕ್ಷಾಗಳು ದಾಖಲೆಗಳನ್ನು ಹೊಂದಿಲ್ಲದಿರುವುದು ಸ್ಪಷ್ಟವಾಗಿದೆ.

ದಾಖಲೆ ಇಲ್ಲದೆ ಜಿಪಿಎಸ್ ನಂಬರ್ ಇಲ್ಲದ ಆಟೋಗಳನ್ನು ತಮ್ಮ ಮನೆಗಳಲ್ಲಿಯೇ ನಿಲ್ಲಿಸಿಕೊಳ್ಳಿ, ಯಾವುದೇ ಕಾರಣಕ್ಕೂ ರಸ್ತೆಗೆ ಇಳಿಸದಿರಿ. ಒಂದು ವೇಳೆ ರಸ್ತೆಯಲ್ಲಿ ಜಿಪಿಎಸ್ ಇಲ್ಲದ ನಂಬರ್ ಕಂಡುಬAದಲ್ಲಿ ರಿಕ್ಷಾಗಳನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಇದರಿಂದ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ, ಈ ಬಗ್ಗೆ ಎಚ್ಚರವಿರಲಿ ಎಂದರು. ಸಮವಸ್ತç ಇಲ್ಲದೆ ಆಟೋ ರಿಕ್ಷಾಗಳನ್ನು ಓಡಿಸದಿರಿ. ಉಳಿದ ಆಟೋ ರಿಕ್ಷಾಗಳಿಗೆ ಜಿಪಿಎಸ್ ನಂಬರ್‌ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ವೃತ್ತ ನಿರೀಕ್ಷಕರಾದ ಶಿವರಾಜ್ ಮುಧೋಳ್ ಮಾತನಾಡಿ, ಗೋಣಿಕೊಪ್ಪ ನಗರದಲ್ಲಿ ಕೆಲವು ಆಟೋ ರಿಕ್ಷಾಗಳು ನಿಲ್ದಾಣದ ಸುತ್ತಲು ಅಡ್ಡಾದಿಡ್ಡಿ ಸಂಚಾರ ಮಾಡಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದ್ದವು. ಇದೀಗÀ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ. ಇದೇ ರೀತಿಯಲ್ಲಿ ಇಲಾಖೆಯೊಂದಿಗೆ ಸಹಕರಿಸಿ ನಿಯಮಗಳನ್ನು ಪಾಲಿಸಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಠಾಣಾಧಿಕಾರಿ ಕಾಳೇಗೌಡ, ಆಟೋ ಚಾಲಕರ-ಮಾಲೀಕರ ಸಂಘದ ಪದಾಧಿಕಾರಿಗಳಾದ ಜಪ್ಪು ಸುಬ್ಬಯ್ಯ, ಮತ್ತಿತರರು ಉಪಸ್ಥಿತರಿದ್ದರು.