ಮಡಿಕೇರಿ, ಜು. ೨೩: ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ಬಿಜೆಪಿ ವತಿಯಿಂದ ರಾಜ್ಯವ್ಯಾಪಿ ಮನೆ ಮನೆ ಸಂಪರ್ಕ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲೆಡೆ ಈ ಅಭಿಯಾನವನ್ನು ತಾ. ೨೫ ಮತ್ತು ೨೬ ರಂದು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ವ್ಯವಸ್ಥಿತವಾಗಿ ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಎಮ್ಯುನರೇಷನ್ ಫಾರಂಗಳ ವಿತರಣೆ ಬಹುತೇಕ ಮುಕ್ತಾಯಗೊಂಡಿದ್ದು, ಹಿಂದಿರುಗಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಅರ್ಹ ಮತದಾರರು ಯಾರು ಈ ಪಟ್ಟಿಯಿಂದ ಹೊರ ಉಳಿಯಬಾರದೆಂಬ ಉದ್ದೇಶದಿಂದ ಬಿಜೆಪಿ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಎಸ್ಐಆರ್ ಬಗ್ಗೆ ಜಾಗೃತಿ ಮೂಡಿಸಿ ತೊಂದರೆಗಳಿದ್ದಲ್ಲಿ ನಿವಾರಿಸುವ ಕೆಲಸ ಮಾಡಲಿದೆ. ಪ್ರತಿ ಬೂತ್ ನಲ್ಲಿಯೂ ಓರ್ವ ಕಾರ್ಯಕರ್ತ ತಲಾ ೨೦ ಮನೆಗಳಿಗೆ ಭೇಟಿ ನೀಡಿ ಸಮಾಲೋಚಿಸಿ ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ತಿಳಿಸಿಕೊಡಲಿದ್ದಾರೆ ಎಂದು ಹೇಳಿದರು.
ದೆಹಲಿಯಲ್ಲಿ ನಡೆಯು ತ್ತಿರುವ ಹೋರಾಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರವಿ ಕಾಳಪ್ಪ, ಮರುಪರೀಕ್ಷೆ ನಡೆದರೂ ಕೇಂದ್ರ ಸರಕಾರದ ಮೇಲೆ ಗೂಬೆಕೂರಿಸುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ಗಲಭೆ ಸೃಷ್ಟಿಸುವ ಹುನ್ನಾರ ಇದಾಗಿದ್ದು, ಸಂವಿಧಾನ ವಿರೋಧಿ ಕೃತ್ಯ ನಡೆಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ವಿರೋಧಿಸಿ ತಾ. ೨೪ ರಂದು (ಇಂದು) ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಬಿಜಿಪಿ ಮಾಜಿ ಜಿಲ್ಲಾಧ್ಯಕ್ಷ, ವೀರಾಜಪೇಟೆ ಕ್ಷೇತ್ರ ಬಿಎಲ್ಎ ೧ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ಮನೆ ಮನೆ ಸಂಪರ್ಕ ನಡೆಸಿ ಎಸ್ಐಆರ್ ಕುರಿತು ಜಾಗೃತಿ ಮೂಡಿಸಲಾಗುವುದು. ಗೊಂದಲಗಳಿದ್ದಲ್ಲಿ ಪರಿಹರಿಸಲು ಕೈಜೋಡಿಸಲಾಗುವುದು ಎಂದರು.
ಬಿಜೆಪಿ ವಕ್ತಾರ ಬಿ.ಕೆ. ಅರುಣ್ ಕುಮಾರ್ ಮಾತನಾಡಿ, ನೀಟ್ ಪರೀಕ್ಷೆ ನಡೆಸಿದ ಏಜೆನ್ಸಿ ಮುಖ್ಯಸ್ಥರ ರಾಜೀನಾಮೆ ಕೇಳಬೇಕಾದವರು ಶಿಕ್ಷಣ ಸಚಿವರ ರಾಜೀನಾಮೆ ಕೇಳಲು ಕಾರಣವೇನು ಎಂದು ಪ್ರಶ್ನಿಸಿ, ಇದು ದೇಶಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನವಾಗಿದೆ.
ಹೋರಾಟಕ್ಕೆ ಬರುತ್ತಿರುವ ಹಣದ ಮೂಲದ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ಯಾವುದೋ ವಿಷಯಕ್ಕೆ ಇನ್ನೊಂದು ವಿಷಯ ತಳುಕು ಹಾಕಿ ಪ್ರತಿಭಟನೆ ನಡೆಸಲಾಗುತ್ತಿದೆ. ವಿಪಕ್ಷ ದೇಶದ ಹಿತಕಾಯಲು ಮುಂದಾಗಬೇಕು. ದೊಂಬಿ ಸೃಷ್ಟಿಸಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಾರದೆAದರು.
ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ, ಪ್ರಧಾನಿ ನಿವಾಸದ ಮುಂದೆ ಹೋರಾಟ ಮಾಡಿದರೆ ಬಂಧಿಸದೆ ಏನು ಮಾಡಬೇಕು? ಮಡಿಕೇರಿಯಲ್ಲಿ ನಡೆದ ಪ್ರತಿಭಟನೆ ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು. ಗೋಷ್ಠಿಯಲ್ಲಿ ಮಾಧ್ಯಮ ಪ್ರಮುಖ್ ಸಜಿಲ್ ಕೃಷ್ಣ ಹಾಜರಿದ್ದರು.