ಚೆಟ್ಟಳ್ಳಿ, ಜು. ೨೩: ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಧೀನದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಚೆಟ್ಟಳ್ಳಿಯ ಕೇಂದ್ರ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ವೈಜ್ಞಾನಿಕ ಅಣಬೆ ಉತ್ಪಾದನೆ ಮತ್ತು ಬೇಸಾಯ ತಂತ್ರಜ್ಞಾನ ಕುರಿತ ಮೂರು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಣಬೆ ಕೃಷಿಯನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳುವ ಮೂಲಕ ರೈತರು ಕಡಿಮೆ ಜಾಗದಲ್ಲಿ ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ರೈತರು, ಯುವಕರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಆಸಕ್ತ ಕೃಷಿಕರಿಗೆ ಅಣಬೆ ಉತ್ಪಾದನೆಯ ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಬೀಜಗಳ ಬಳಕೆ, ಬೆಳೆಯ ನಿರ್ವಹಣೆ, ರೋಗ-ಕೀಟ ನಿಯಂತ್ರಣ, ಕೊಯ್ಲಿನ ನಂತರದ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಪ್ರೇಮ ಗಣೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಡಿಕೇರಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಶಶಿಧರ್ ಹೆಚ್. ರೈತರು ಅಣಬೆ ಕೃಷಿಯನ್ನು ವಾಣಿಜ್ಯ ಬೆಳೆಯಾಗಿ ಅಳವಡಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ವೈಜ್ಞಾನಿಕ ಅಣಬೆ ಉತ್ಪಾದನೆ ಮತ್ತು ಬೇಸಾಯ ತಂತ್ರಜ್ಞಾನದ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಪ್ರೇಮ ಗಣೇಶ್ ಹಾಗೂ ಉಪನಿರ್ದೇಶಕ ಶಶಿಧರ್ ಹೆಚ್. ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಚೆಟ್ಟಳ್ಳಿ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ (ಪ್ರಬಾರ) ಡಾ. ಮುರಳೀಧರ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಸಸ್ಯ ರೋಗಶಾಸ್ತç ವಿಭಾಗದ ವಿಜ್ಞಾನಿ ಡಾ. ಹರಿತಾ ಮೋಹನ್ ಎಂ. ಸ್ವಾಗತಿಸಿ, ತರಬೇತಿಯ ಉದ್ದೇಶವನ್ನು ವಿವರಿಸಿದರು. ಹಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಡಾ. ನಯನ್ ದೀಪಕ್ ಜಿ. ವಂದಿಸಿದರು. ಮೂರು ದಿನಗಳ ತರಬೇತಿಯಲ್ಲಿ ಅಣಬೆ ಕೃಷಿಯ ವಿವಿಧ ಹಂತಗಳ ಕುರಿತು ತಜ್ಞರಿಂದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಮಾಹಿತಿ, ರೈತರಿಗೆ ಉದ್ಯಮಶೀಲತೆ ಬೆಳೆಸುವತ್ತ ಮಾರ್ಗದರ್ಶನ ನೀಡಲಾಗುತ್ತಿದೆ.