ಚೆಯ್ಯಂಡಾಣೆ, ಜು. ೨೭: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ತೋಟಗಳಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು ಕಾಫಿ, ಬಾಳೆ, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ತುಳಿದು ನಾಶಪಡಿಸುವುದಲ್ಲದೆ ಬೆಳೆಗಾರರ ಸ್ಪಿçಂಕ್ಲರ್ ಪೈಪ್, ಮೋಟಾರ್ ಪಂಪ್‌ಸೆಟ್ ಹಾಗೂ ಟಿಲ್ಲರ್‌ಗಳನ್ನು ಧ್ವಂಸಗೊಳಿಸಿ ಅಪಾರ ನಷ್ಟ ಉಂಟುಮಾಡುತ್ತಿವೆ. ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆ ಹಾವಳಿಯಿದ್ದು, ಆನೆಗಳನ್ನು ಓಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾಫಿ ಹಾಗೂ ಅಡಿಕೆ ಸೇರಿದಂತೆ ಫಲ ನೀಡುವ ಗಿಡಗಳನ್ನು ತುಳಿದು ನಾಶಪಡಿಸಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಕಾಡಾನೆಗಳನ್ನು ಸೆರೆಹಿಡಿಯಲು ಅನುಮತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ತೆರಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಬೆಳೆಗಾರ ಎಸ್.ಎಸ್. ಸುಮಂತ್ ಆರೋಪಿಸಿದ್ದಾರೆ. ಅರಣ್ಯ ಇಲಾಖೆಯ ಕ್ಯಾಂಪ್ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಗಳನ್ನು ಕಾಡಿಗೆ ಓಡಿಸುವ ಪ್ರಯತ್ನ ಮಾಡುತ್ತಿದ್ದು, ಇದರಿಂದ ಗಾಬರಿಗೊಂಡ ಆನೆಗಳು ಮತ್ತೆ ತೋಟಗಳಿಗೆ ನುಗ್ಗಿ ಹೆಚ್ಚಿನ ಹಾನಿ ಉಂಟು ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆಗಳನ್ನು ಸೆರೆಹಿಡಿದು ಗ್ರಾಮದಿಂದ ಸ್ಥಳಾಂತರಿಸಬೇಕು. ನಷ್ಟ ಉಂಟಾದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ವಿವಿಧ ಸಂಘ - ಸಂಸ್ಥೆಗಳ ಸಹಕಾರದೊಂದಿಗೆ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.