ಸಿದ್ದಾಪುರ, ಜು. ೨೭: ಕಾಫಿ ತೋಟದಿಂದ ತಪ್ಪಿಸಿಕೊಂಡ ಮರಿಯಾನೆ ಕಾರ್ಯಾಚರಣೆ ತಂಡವನ್ನು ದಿಕ್ಕು ತಪ್ಪಿಸಿ ಸುಮಾರು ೧೦ ಕಿ.ಮೀ ದೂರದವರೆಗೆ ತೆರಳಿ ಕಾಫಿ ತೋಟದೊಳಗೆ ಸುತ್ತಾಡುತ್ತಿರುವುದು ಕಂಡು ಬಂದಿದೆ. ಶನಿವಾರದಂದು ಅಮ್ಮತ್ತಿ ಸಮೀಪದ ಆನಂದಪುರ ಪುಲಿಯೇರಿ ಗ್ರಾಮದ ಕಾಫಿ ತೋಟದೊಳಗೆ ಹೆಣ್ಣಾನೆಯೊಂದು ಸಾವನ್ನಪ್ಪಿತ್ತು.

ಇದರ ಒಂದು ವರ್ಷ ಪ್ರಾಯದ ಮರಿಯಾನೆ ತನ್ನ ತಾಯಿಯ ಮೃತ ದೇಹದ ಬಳಿ ಚೀರಾಡುತ್ತಾ ರೋಧಿಸುತ್ತಿತ್ತು. ಅಲ್ಲದೆ ಸಮೀಪಕ್ಕೆ ಯಾರನ್ನು ಬಿಡದೆ ಸತ್ತ ಕಾಡಾನೆಯ ಮರಣೋತ್ತರ ಪರೀಕ್ಷೆಗೆ ಅಡ್ಡಿಪಡಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಮರಿಯಾನೆಯನ್ನು ಬಲೆ ಮೂಲಕ ಸೆರೆಹಿಡಿದು ಸಮೀಪದ ಮನೆಯೊಂದರಲ್ಲಿ ಹಗ್ಗದಿಂದ ಕಟ್ಟಿ ಹಾಕಿದ್ದರು ಬಳಿಕ ಅದನ್ನು ಸ್ಥಳಾಂತರ ಮಾಡಲು ಕರೆದುಕೊಂಡು ಬರುವ ವೇಳೆಯಲ್ಲಿ ಅದು ಮೂರು ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಸ್ಥಳದಿಂದ ಓಡಿಹೋಗಿತ್ತು.

ರಾತ್ರಿವರೆಗೆ ಹುಡುಕಾಡಿದರೂ ಪತ್ತೆ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ಸುಮಾರು ೪೦ ಮಂದಿ ಸಿಬ್ಬಂದಿ ಆನಂದಪುರ ಪುಲಿಯೇರಿ ಗ್ರಾಮದಿಂದ ಕಾರ್ಯಾಚರಣೆ ಕೈಗೊಂಡರು. ಬೆಳಗ್ಗಿನಿಂದ ಸಂಜೆವರೆಗೆ ಕಾರ್ಯಾಚರಣೆ ನಡೆಸುವ ಸಂದರ್ಭ ಅಪರಾಹ್ನದ ನಂತರ ಸುಮಾರು ೧೦ ಕಿ.ಮೀ ದೂರದವರೆಗೆ ತೆರಳಿದಾಗಿ ತಿತಿಮತಿ ವಲಯ ಅರಣ್ಯದ ಚೆನ್ನಯ್ಯನ ಕೋಟೆ ಗ್ರಾಮದ ವ್ಯಾಪ್ತಿಯಲ್ಲಿ ಮರಿಯಾನೆ ಕಂಡುಬAತು.

ಕಾರ್ಯಾಚರಣೆ ತಂಡ ಅಲ್ಲಿಗೆ ತೆರಳುವಷ್ಟರಲ್ಲಿ ಅದು ಅಲ್ಲಿಂದ ಓಡಿ ತಪ್ಪಿಸಿಕೊಂಡು ಮೇಕೂರು -ಹೊಸ್ಕೇರಿ ಗ್ರಾಮಕ್ಕೆ ತೆರಳಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು.

ಮರಿಯಾನೆಯ ಚಲನವಲನವನ್ನು ಕಂಡುಹಿಡಿಯಲು ಹಾಗೂ ಅದನ್ನು ನೋಡಿಕೊಳ್ಳಲು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ.

-ವಾಸು ಎ.ಎನ್.