ಸಿದ್ದಾಪುರ, ಜು. ೨೮: ಭಾನುವಾರದಂದು ತಪ್ಪಿಸಿಕೊಂಡಿದ್ದ ಮರಿಯಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಿದರೂ ಮರಿಯಾನೆ ಸಿಕ್ಕಿಲ್ಲ. ಶನಿವಾರದಂದು ರಾತ್ರಿ ಅಮ್ಮತ್ತಿ ಸಮೀಪದ ಆನಂದಪುರ - ಪುಲೀಯೇರಿ ಗ್ರಾಮದ ಕಾಫಿ ತೋಟದೊಳಗೆ ಹೆಣ್ಣಾನೆಯೊಂದು ಸಾವನ್ನಪ್ಪಿದ ಘಟನೆ ನಡೆದಿತ್ತು.
ಈ ಆನೆಯ ಮರಿಯು ತಾಯಿ ಆನೆಯ ಮರಣೋತ್ತರ ಪರೀಕ್ಷೆ ವೇಳೆ ರೋದಿಸುತ್ತಾ ಅಡ್ಡಿಪಡಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮರಿಯಾನೆಯನ್ನು ಸಮೀಪದಲ್ಲಿ ಕಟ್ಟಿ ಹಾಕಿದ್ದರು. ನಂತರ ಇದನ್ನು ಸ್ಥಳಾಂತರ ಮಾಡಲು ಕರೆದುಕೊಂಡು ಬರುವ ಸಂದರ್ಭ ಮಾರಿಯಾನೆ ತಪ್ಪಿಸಿಕೊಂಡಿತ್ತು. ಕೂಡಲೇ ಕಾಡಾನೆಗಳ ಕಾರ್ಯಾಚರಣೆ ತಂಡ ಅದರ ಹಿಂದೆ ಓಡಿ ಹಿಡಿಯಲು ಯತ್ನಿಸಿದಾಗ ಅದು ದಾಳಿ ನಡೆಸಿದ್ದರಿಂದ ಮೂರು ಮಂದಿ ಸಿಬ್ಬಂದಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು. ಇದಾದ ಬಳಿಕ ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮರಿಯಾನೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಅದು ಕಾರ್ಯಾಚರಣೆ ತಂಡದ ದಿಕ್ಕು ತಪ್ಪಿಸುತ್ತ ತೆರಳುತ್ತಿದೆ. ಸೋಮವಾರದಂದು ಚೆನ್ನಯ್ಯನಕೋಟೆ ಗ್ರಾಮದಲ್ಲಿ ಕಂಡುಬAದ ಮರಿಯಾನೆ ನಂತರ ಕಾಫಿ ತೋಟದೊಳಗೆ ನುಸುಳಿ ಓಡಿ ಮೇಕೂರು - ಹೊಸ್ಕೇರಿ ಗ್ರಾಮಕ್ಕೆ ಲಗ್ಗೆಇಟ್ಟು ಅಲ್ಲೇ ಸಂಚರಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು ಇದಾದ ಬಳಿಕ ಮಂಗಳವಾರದAದು ಮತ್ತೆ ಪಾಲಿಬೆಟ್ಟ ರಸ್ತೆಯ ತೂಪನಕೊಲ್ಲಿ, ವಡ್ಡರಕಾಡು ಭಾಗದ ಕಾಫಿ ತೋಟಗಳಲ್ಲಿ ಸುತ್ತಾಡುತ್ತಿರುವುದು ಕಂಡುಬAದಿತು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡ ಸ್ಥಳಕ್ಕೆ ತೆರಳಿತು. ಅಷ್ಟರಲ್ಲಿ ಅದು ಮೂರು ಬಾರಿ ತೂಪನಕೊಲ್ಲಿ ಭಾಗದ ಬೆಟ್ಟ ಪ್ರದೇಶಕ್ಕೆ ಹತ್ತಿ ಇಳಿದು ಕಾರ್ಯಾಚರಣೆ ತಂಡವನ್ನು ಸುತ್ತಾಡಿಸಿತು ಎಂದು ತಿಳಿದುಬಂದಿದೆ. ಸುಮಾರು ೫೦ಕ್ಕೂ ಅಧಿಕ ಅರಣ್ಯ ಇಲಾಖೆಯ ಸಿಬ್ಬಂದಿ ಆನೆ ಕಾರ್ಯಪಡೆ, ಆರ್ಆರ್ಟಿ ತಂಡದ ಸಿಬ್ಬಂದಿ ಆನೆ ಮರಿಯ ಹಿಂದೆಯೇ ಸುತ್ತುತ್ತಾ ಸೆರೆ ಹಿಡಿಯಲು ಪ್ರಯತ್ನಿಸಿದರೂ ಆನೆ ಮರಿ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದು, ಇದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಮಂಗಳವಾರದAದು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸುವ ಸಂದರ್ಭ ಮರಿಯಾನೆ ಕಾರ್ಯಾಚರಣೆ ತಂಡಕ್ಕೆ ಕಂಡಿದ್ದು ಕೂಡಲೇ ತಂಡ ಅದನ್ನು ಸೆರೆ ಹಿಡಿಯಲು ಮುಂದಾಗುವಷ್ಟರಲ್ಲಿ ಕೂದಲೆಳೆಯ ಅಂತರದಿAದ ತಪ್ಪಿಸಿಕೊಂಡು ಪರಾರಿಯಾಯಿತು. ಇದರಿಂದಾಗಿ ಮತ್ತೆ ಸಂಜೆ ಕಾರ್ಯಾಚರಣೆಯನ್ನು ಮುಂದುವರಿಸಲಾಯಿತು.
ಮರಿಯಾನೆಯು ಕಾರ್ಯಾಚರಣೆ ತಂಡವನ್ನು ದಿಕ್ಕು ತಪ್ಪಿಸಿ ಓಡುತ್ತಿರುವುದರಿಂದ ಅದನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಡ್ರೋನ್ ಕ್ಯಾಮರಾ ಬಳಸಲಾಗುತ್ತಿತ್ತು. ಇದೀಗ ಮಂಗಳವಾರದAದು ಮರಿಯಾನೆ ಸೆರೆಗೆ ಮತ್ತಿಗೋಡು ಸಾಕಾನೆ ಶಿಬಿರದ ಸರಳ ಹಾಗೂ ಲಕ್ಷ್ಮಿ ಆನೆಗಳನ್ನು ಕರೆತಂದಿದ್ದು, ಇವುಗಳು ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡದೊAದಿಗೆ ಸಹಕಾರ ನೀಡುತ್ತಿದ್ದು, ರಾತ್ರಿವರೆಗೂ ಕಾರ್ಯಾಚರಣೆ ನಡೆಯಿತು.
ಕಾರ್ಯಾಚರಣೆಯಲ್ಲಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಿರುಬನಾಥನ್ ಮತ್ತು ಎ.ಸಿ.ಎಫ್. ತಾಸೀನಬಾನು, ಮಾರ್ಗದರ್ಶನದಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಮತ್ತು ಉಪ ವಲಯ ಅರಣ್ಯ ಅಧಿಕಾರಿ ಮನೋಜ್ ನೇತೃತ್ವದಲ್ಲಿ ವೀರಾಜಪೇಟೆ ಮತ್ತು ತಿತಿಮತಿ ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ, ಆರ್ಆರ್ಟಿ ತಂಡದ ಸಿಬ್ಬಂದಿ, ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
- ವಾಸು ಎ.ಎನ್.