ವೀರಾಜಪೇಟೆ, ಜು. ೨೮: ಕಕ್ಕಡ ತಿಂಗಳ ಸಂಭ್ರಮ ಹಾಗೂ ಕೊಡಗಿನ ಸ್ಥಳೀಯ ಸಂಸ್ಕೃತಿಯನ್ನು ಆಚರಿಸುವ ಉದ್ದೇಶದಿಂದ ಶ್ರೀ ಈಶ್ವರ ಇಗ್ಗುತಪ್ಪ ಪೊಮ್ಮಕ್ಕಡ ಕೂಟದ ವತಿಯಿಂದ ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ಮನರಂಜನೆ, ಸಂಗೀತ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯೆ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಮಳೆಗಾಲದ ಕಕ್ಕಡ ತಿಂಗಳಲ್ಲಿ ಕೃಷಿ ಚಟುವಟಿಕೆಗಳ ನಡುವೆ ರೈತರಿಗೆ ಬಿಡುವು ಸಿಗುವ ಸಮಯದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ಮನೋಲ್ಲಾಸ ನೀಡುತ್ತವೆ ಎಂದು ಹೇಳಿದರು.

ಹೊರಗಿನ ಕಲಾವಿದರನ್ನು ಮಾತ್ರ ಅವಲಂಬಿಸದೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಈಶ್ವರ ಇಗ್ಗುತಪ್ಪ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ಗ್ರಾಮೀಣ ಭಾಗದ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಕಲಾವಿದರಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ ಸ್ಥಳೀಯ ಕಲೆ, ಜಾನಪದ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಮಾತನಾಡಿ, ಯುವಜನರು ದುಶ್ಚಟಗಳಿಂದ ದೂರವಿದ್ದು ಕಲೆ, ಸಂಗೀತ ಮತ್ತು ನೃತ್ಯದಂತಹ ಸೃಜನಶೀಲ ಕ್ಷೇತ್ರಗಳತ್ತ ಆಕರ್ಷಿತರಾಗಲು ಇಂತಹ ವೇದಿಕೆಗಳು ಪ್ರೇರಣೆಯಾಗುತ್ತವೆ ಎಂದು ಹೇಳಿದರು.

ಸಂಗೀತ ರಸಮಂಜರಿಯಲ್ಲಿ ಮಾಳೇಟಿರ ಅಜಿತ್, ಬಟ್ಟಿಯಂಡ ಲಿಖಿತ, ಬೊಪ್ಪಂಡ ತ್ರಿಶೂಲ್ ಹಾಗೂ ಟಿ.ಡಿ. ಮೋಹನ್ ಅವರು ಸುಶ್ರಾವ್ಯ ಗಾಯನದ ಮೂಲಕ ಪ್ರೇಕ್ಷಕರ ಮನಗೆದ್ದರು. ಸಂಕೇತ್ ಶಿವಪ್ಪ, ವಿಷ್ಣು, ಕುಡುವಚೇರಿರ ಉಮೇಶ್, ದುಗ್ಗಂಡ ರಿಕ್ಕಿ ಮುತ್ತಪ್ಪ ಹಾಗೂ ಅವರ ತಂಡದ ನೃತ್ಯ ಪ್ರದರ್ಶನಕ್ಕೂ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಕಾಣತಂಡ ಜಗದೀಶ್ ಉಪಸ್ಥಿತರಿದ್ದರು. ಕಾಣತಂಡ ಬೀನಾ ಜಗದೀಶ್ ಹಾಗೂ ಮಾಚಪಂಡ ತುಳಸಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಈಶ್ವರ ಇಗ್ಗುತಪ್ಪ ಪೊಮ್ಮಕ್ಕಡ ಕೂಟದ ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಕಲಾವಿದರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.