*ಗೋಣಿಕೊಪ್ಪ, ಜು. ೨೮: ಕಾಂಗ್ರೆಸ್ ಪಕ್ಷದ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನಕಾರಿಯಾಗಿ ಟೀಕಿಸಿರುವುದನ್ನು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ದೇಶದ ಪ್ರಧಾನಿಯನ್ನು ಹೀನಾಯ ಪದಗಳಿಂದ ನಿಂದಿಸಿ ಮಾತನಾಡುವುದು ಕಾಂಗ್ರೆಸ್ ನಾಯಕರಿಗೆ ಶೋಭೆ ತರುವ ವಿಚಾರವಲ್ಲ ಎಂದಿದ್ದಾರೆ.
ಒಬ್ಬ ವಕೀಲರಾಗಿರುವ ಶಾಸಕರು ಭಾಗವಹಿಸಿದ ಪ್ರತಿಭಟನೆಯಲ್ಲಿ ಇಂತಹ ಕೀಳುಮಟ್ಟದ ಪದಗಳ ಬಳಕೆ ನಡೆದಿರುವುದು ಖಂಡನೀಯ ಹಾಗೂ ನಾಚಿಕೆಗೇಡಿನ ಸಂಗತಿ. ಇಂತಹ ವರ್ತನೆಯು ಅವರ ಮನೋಭಾವವನ್ನು ಕ್ಷೇತ್ರದ ಜನರ ಮುಂದೆ ಬಹಿರಂಗಪಡಿಸಿದೆ ಎಂದು ಆರೋಪಿಸಿದ್ದಾರೆ. ಯಾವುದೇ ಅವಹೇಳನಕಾರಿ ಪದಗಳನ್ನು ಬಳಸಿದರೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಧಕ್ಕೆಯಾಗುವುದಿಲ್ಲ, ವಿಶ್ವದ ಅನೇಕ ರಾಷ್ಟçಗಳು ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಂಡಿವೆ. ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಇಂತಹ ಪ್ರತಿಭಟನೆಗಳನ್ನು ನಡೆಸಿದರೆ ಅದನ್ನು ಕೊಡಗಿನ ಜನತೆ ಒಪ್ಪುವುದಿಲ್ಲ ಎಂದು ಚಲನ್ ಟೀಕಿಸಿದ್ದಾರೆ.
ಪ್ರತಿಭಟನೆಯಲ್ಲಿ ಬೆಲೆ ಏರಿಕೆ ವಿಚಾರವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೆಲೆ ಇಳಿಕೆ ಮಾಡಿದ ಒಂದು ವಸ್ತುವಿನ ಹೆಸರನ್ನಾದರೂ ಹೇಳಲಿ ಎಂದು ಸವಾಲು ಹಾಕಿದ್ದಾರೆ.