ಚೆಟ್ಟಳ್ಳಿ, ಆ. ೨: ಚೆಟ್ಟಳ್ಳಿ ಸಮೀಪದ ಪೊನ್ನತ್ತ್ಮೊಟ್ಟೆ ಗ್ರಾಮದಲ್ಲಿ ಮೊನ್ನೆ ರಾತ್ರಿ ಜೋಡಿ ಕಾಡಾನೆಗಳು ತೋಟಕ್ಕೆ ನುಗ್ಗಿ ಅಡಿಕೆ ಗಿಡಗಳನ್ನು ನಾಶಪಡಿಸಿದ್ದು, ಕೃಷಿಕರಲ್ಲಿ ಆತಂಕ ಮನೆ ಮಾಡಿದೆ.

ಪೊನ್ನತ್ತ್ತ್ಮೊಟ್ಟೆಯ ಕೃಷಿಕರಾದ ಕೊಂಗೇಟಿರ ಡಬ್ಲೂö್ಯ. ಬೋಪಯ್ಯ ಹಾಗೂ ತೇಲಪಂಡ ದೇವಯ್ಯ ಅವರ ತೋಟಗಳಿಗೆ ನುಗ್ಗಿದ ಕಾಡಾನೆಗಳು, ಕಳೆದ ವರ್ಷ ಹಾಗೂ ಈ ಬಾರಿ ಹೊಸದಾಗಿ ನೆಡಲಾಗಿದ್ದ ಅಡಿಕೆ ಗಿಡಗಳನ್ನು ತುಳಿದು ನಾಶಪಡಿಸಿವೆ. ಇದರಿಂದ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದೆ ಎಂದು ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಅರಣ್ಯ ಇಲಾಖೆ ತೋಟ ಪ್ರದೇಶಗಳಲ್ಲಿ ಓಡಾಡುತ್ತಿದ್ದ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಿತ್ತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಅದೇ ಜೋಡಿ ಆನೆಗಳು ಕಾಫಿ ಹಾಗೂ ಅಡಿಕೆ ತೋಟಗಳಿಗೆ ನುಗ್ಗಿವೆ. ತೋಟಗಳಲ್ಲಿ ಕಾಡಾನೆಗಳ ನಿರಂತರ ಓಡಾಟದಿಂದ ಕಾರ್ಮಿಕರು ಸಹ ಆತಂಕಕ್ಕೊಳಗಾಗಿದ್ದು, ಕೃಷಿ ಚಟುವಟಿಕೆಗಳಿಗೆ ತೆರಳಲು ಭಯಪಡುವಂತಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ, ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತೆ ಮತ್ತೆ ಆನೆಗಳು ತೋಟಗಳಿಗೆ ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾನಿಗೊಳಗಾದ ಅಡಿಕೆ ಸೇರಿದಂತೆ ಇತರ ಬೆಳೆಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಪೊನ್ನತ್ತ್ಮೊಟ್ಟೆ ಭಾಗದ ಕೃಷಿಕರು ಆಗ್ರಹಿಸಿದ್ದಾರೆ. - ಕಾಳಯ್ಯ