ಪೊನ್ನಂಪೇಟೆಯಲ್ಲಿ ಸಂಭ್ರಮಾಚರಣೆ

ಮಡಿಕೇರಿ, ಆ. ೨: ಕೊಡಗಿನಲ್ಲಿ ತಾ. ೩ ರಂದು (ಇಂದು) ಕಕ್ಕಡ ೧೮ರ ಸಂಭ್ರಮ. ಕೊಡಗಿನಲ್ಲಿ ವಿಶೇಷ ಆಚರಣೆಯಾಗಿರುವ ಮದ್ದುಪಾಯಸ… ಮದ್ದುಪುಟ್ಟ್ - ನಾಟಿಕೋಳಿಯ ಸವಿಯೊಂದಿಗೆ ಇನ್ನಿತರ ಮಳೆಗಾಲದ ಸಂದರ್ಭದ ಭಕ್ಷö್ಯ ಭೋಜನಗಳೊಂದಿಗೆ ಈ ಸಂಭ್ರಮಾಚರಣೆ ನಡೆಯುತ್ತದೆ.

ಕಕ್ಕಡ ೧೮ ರ ಸಂಭ್ರಮವನ್ನು ಕಳೆದ ೧೫ ವರ್ಷಗಳಿಂದ ಪೊನ್ನಂಪೇಟೆಯ ಕೊಡವ ಹಿತರಕ್ಷಣಾ ಬಳಗ ಕಿಗ್ಗಟ್ಟ್ನಾಡ್ ಸಂಘಟನೆ ವತಿಯಿಂದ ಪೊನ್ನಂಪೇಟೆ ಕೊಡವ ಸಮಾಜದ ಸಹಕಾರದಲ್ಲಿ ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಇದರ ಅಂಗವಾಗಿ ಸೋಮವಾರ (ಇಂದು) ಸಂಜೆ ಕೊಡವ ಸಮಾಜದಿಂದ ಪಂಜಿನ ಮೆರವಣಿಗೆ ನಡೆಯಲಿದೆ.

ಮುಖ್ಯರಸ್ತೆಯಲ್ಲಿ ಮೆರವಣಿಗೆಯೊಂದಿಗೆ ಬಸವೇಶ್ವರ ದೇವಸ್ಥಾನದ ಪ್ರದಕ್ಷಿಣೆಯೊಂದಿಗೆ ಮತ್ತೆ ಕೊಡವ ಸಮಾಜಕ್ಕೆ ತಲುಪಿ ಅಲ್ಲಿ ಸಭಾ ಕಾರ್ಯಕ್ರಮ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ಎಂ. ರಾಜಾ ನಂಜಪ್ಪ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಪೊನ್ನಂಪೇಟೆ ಅರಣ್ಯ ಕಾಲೇಜಿನ ನಿವೃತ್ತ ಡೀನ್ ಡಾ. ಚೆಪ್ಪುಡಿರ ಜಿ. ಕುಶಾಲಪ್ಪ, ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರು ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭ ೧೦ನೇ ತರಗತಿಯಲ್ಲಿ ಕಿಗ್ಗಟ್ಟ್ನಾಡ್ ವ್ಯಾಪ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಗೋಣಿಕೊಪ್ಪ ಲಯನ್ಸ್ನ ನೆಲ್ಲಮಾಡ ಸಿದ್ದಾಂತ್ ಕಾವೇರಪ್ಪ, ಮಂಗಳೂರು ಆಳ್ವಾಸ್ ಕಾಲೇಜಿನ ಅಜ್ಜಿಕುಟ್ಟಿರ ಜಶ್ ಕಾವೇರಪ್ಪ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಿಐಟಿ ಕಾಲೇಜಿನ ಕಾಟಿಮಾಡ ಭಾಸಿತ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ಕುರ್ಕಂಗ’ ನಾಟಕ ಪ್ರದರ್ಶನದೊಂದಿಗೆ ಕಕ್ಕಡ ೧೮ರ ವಿಶೇಷತೆಯಾದ ಮದ್ದು ಪಾಯಿಸ, ಮದ್ದ್ಪುಟ್ಟ್ ಹಾಗೂ ಕಕ್ಕಡಕೋಳಿ ಸಾರಿನ ಭೋಜನದ ವ್ಯವಸ್ಥೆ ಮಾಡಲಾಗಿದೆ.