ಮಡಿಕೇರಿ, ಆ. ೨: ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನರ ಸೇವೆಗೆ ಯುವ ವೈದ್ಯರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು, ಇಂತಹ ವೈದ್ಯರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ನೀಡಲಾಗುತ್ತದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.

ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ವತಿಯಿಂದ ಆಯೋಜಿತ ವೈದ್ಯರ ದಿನಾಚರಣೆ ಸಂದರ್ಭ ಸಾಧಕ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಡಾ. ಮಂತರ್ ಗೌಡ, ಎಲ್ಲಾ ಸವಾಲುಗಳ ನಡುವೇ ವೈದ್ಯರು, ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವ ಮಹತ್ತರ ಹೊಣೆ ಹೊಂದಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ತಾನು ಶಾಸಕನಾದ ಬಳಿಕ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸೇರಿದಂತೆ ಕ್ಷೇತ್ರದ ಹಲವು ಪ್ರಮುಖ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ ನೀಡಿದ್ದೇನೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಗ್ರಾಮ, ತಾಲೂಕು ಆಸ್ಪತ್ರೆಗಳಲ್ಲಿ ಕರ್ತವ್ಯಕ್ಕೆ ವೈದ್ಯರು ಮನಸ್ಸು ಮಾಡಬೇಕೆಂದು ಕರೆ ನೀಡಿದರು. ಮಡಿಕೇರಿಯಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾಡುವ ಚಿಂತನೆಯಿAದ ಸಾಕಷ್ಟು ಸೌಲಭ್ಯವನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಶೀಘ್ರದಲ್ಲಿಯೇ ಸುಸಜ್ಜಿತ ಹೃದ್ರೋಗ ಚಿಕಿತ್ಸಾ ಘಟಕವೂ ಇಲ್ಲಿ ಪ್ರಾರಂಭವಾಗಲಿದ್ದು ಇದರಿಂದ ಪರ ಊರುಗಳ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಕೊಡಗಿನ ಜನತೆಯ ಸಮಸ್ಯೆ ಪರಿಹಾರವಾಗಲಿದೆ ಎಂದು ಶಾಸಕರು ನುಡಿದರು.

ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ. ಶ್ಯಾಮ್ ಅಪ್ಪಣ್ಣ ಮಾತನಾಡಿ, ಶಾಸಕರೇ ವೈದ್ಯರಾಗಿರುವ ಹಿನ್ನಲೆಯಲ್ಲಿ ವೈದ್ಯರ ಸಮಸ್ಯೆ, ಸಂಕಷ್ಟ, ಸವಾಲುಗಳ ಬಗ್ಗೆ ಚೆನ್ನಾಗಿ ಅರಿವಾಗಿರುತ್ತದೆ. ಕೊಡಗಿನಲ್ಲಿ ಸಾಕಷ್ಟು ಸವಾಲುಗಳ ಮಧ್ಯೆ ಕಾರ್ಯನಿರ್ವಹಿಸುತ್ತಿರುವ ತನ್ನದೇ ವೃತ್ತಿನಿರತರ ಬೇಡಿಕೆಗೆ ಶಾಸಕರು ಸ್ಪಂದಿಸುವAತಾಗಲಿ ಎಂದರಲ್ಲದೇ, ಕೊಡಗು ಘಟಕಕ್ಕೆ ತನ್ನದೇ ಸ್ವಂತ ಕಚೇರಿ ನಿರ್ಮಾಣಕ್ಕೆ ಶಾಸಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಪ್ರಧಾನ ಕಾರ್ಯದರ್ಶಿ ಚೆರಿಯಮನೆ ಡಾ. ಪ್ರಶಾಂತ್ ಘಟಕಕ್ಕೆ ಹೊಸದ್ದಾಗಿ ಸದಸ್ಯರಾದವರ ಪರಿಚಯ ಮಾಡಿದರು. ಡಾ. ಸುಮುಖ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ. ಸುಧಾಕರ್ ವಂದಿಸಿದರು. ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಡಾ. ಅಯ್ಯಪ್ಪ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ. ಲೋಕೇಶ್ ನಿರ್ವಹಿಸಿದರು. ಡಾ. ಮಂತರ್ ಗೌಡ ಅವರಿಗೆ ಭಾರತೀಯ ವೈದ್ಯಕೀಯ ಒಕ್ಕೂಟದ ಕೊಡಗು ಘಟಕದ ಸದಸ್ಯತ್ವ ನೀಡಿ ಗೌರವಿಸಲಾಯಿತು.

ಸಾಧಕ ವೈದ್ಯರಿಗೆ ಸನ್ಮಾನ

ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ವತಿಯಿಂದ ಸಾಧಕ ವೈದ್ಯರನ್ನು ಸನ್ಮಾನಿಸಲಾಯಿತು. ಹಿರಿಯ ವೈದ್ಯ ಡಾ. ರಮೇಶ್ ಬೋಪಯ್ಯ, ಡಾ. ಎಂ.ಎ. ದೇವಯ್ಯ, ಡಾ. ಪುರುಷೋತ್ತಮ್, ಡಾ. ಕುಶ್ವಂತ್ ಕೋಳಿಬೈಲು, ಡಾ. ರೇಣುಕಾ ಅವರನ್ನು ಶಾಸಕ ಡಾ. ಮಂತರ್ ಗೌಡ ಸನ್ಮಾನಿಸಿದರು.