ಶನಿವಾರಸಂತೆ, ಆ. ೧೦: ದೇಶದಲ್ಲಿ ಸಾಮಾಜಿಕ ಸಮಾನತೆ ಸಾಧಿಸಿ, ಜನರ ಬದುಕನ್ನು ಹಸನುಗೊಳಿಸಿದ ಹರಿಕಾರರು ಹಾಗೂ ದಾರ್ಶನಿಕ ಮಹನೀಯರನ್ನು ಸ್ಮರಿಸುವ ಮೂಲಕ ‘ನಾವೆಲ್ಲ ಒಂದು, ನಾವೆಲ್ಲ ಬಂಧು’ ಎಂಬ ಭಾವನೆ ಬೆಳೆಸಿಕೊಂಡಾಗ ಅಖಂಡ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ಮುಳ್ಳೂರು-ಬಸವಪಟ್ಟಣ ಶ್ರೀ ತೋಂಟದಾರ್ಯ ಮಠದ ಸ್ವತಂತ್ರ ಬಸವಲಿಂಗಶಿವಯೋಗಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಕೊಡ್ಲಿಪೇಟೆಯಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಭಾನುವಾರ ರಾತ್ರಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನದ ೬ನೇ ವರ್ಷದ ಬೃಹತ್ ಪಂಜಿನ ಮೆರವಣಿಗೆ ಹಾಗೂ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಅಖಂಡ ಭಾರತದ ಸಂಕಲ್ಪ ಕೈಗೊಂಡಿರುವ ಯುವಜನತೆ ಮುಂದಿನ ಪೀಳಿಗೆಯಲ್ಲಿಯೂ ದೇಶಭಕ್ತಿ ಹಾಗೂ ಹಿಂದೂತ್ವದ ಭಾವನೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡ್ಲಿಪೇಟೆಯ ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಎನ್.ಸಿ. ಗೋವಿಂದ್ ರಾಜ್ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ. ಹಿಂದೂ ಸಮಾಜ ಸಂಘಟಿತವಾಗಿ ಒಂದಾದಾಗ ಭವ್ಯ ಅಖಂಡ ಭಾರತ ನಿರ್ಮಾಣ ಸಾಧ್ಯ. ದೇಶದ ರಕ್ಷಣೆಯ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದರು. ಕಾರ್ಯಕ್ರಮದಲ್ಲಿ ಕಲ್ಲುಮಠದ ಮಹಾಂತ ಸ್ವಾಮೀಜಿ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಅಬ್ಬೂರುಕಟ್ಟೆ ಬೋಜೇಗೌಡ, ತಾಲೂಕು ಸಂಯೋಜಕ ವಿನು ಮಾದಾಪುರ, ಸಹ ಸಂಯೋಜಕ ಅನುಜ್, ತಾಲೂಕು ಪ್ರಚಾರಕ್ ಅನಿಲ್ ಉಪಸ್ಥಿತರಿದ್ದರು.
ಸಕಲೇಶಪುರದ ಮುಖಂಡ ರಘುಜಿ, ಸೋಮವಾರಪೇಟೆ ಪ್ರಮುಖ ಸುಭಾಷ್ ತಿಮ್ಮಯ್ಯ, ಆದರ್ಶ, ಗಿರೀಶ್, ಮೋಕ್ಷಿತ್ ರಾಜ್, ದಯಾನಂದ್, ಶನಿವಾರಸಂತೆಯ ಪ್ರಮುಖರಾದ ಸೋಮಶೇಖರ್ ಪೂಜಾರಿ, ಪುನೀತ್ ತಾಳೂರು, ತನ್ಮಯ್, ಬಿಳಾಹ ದಿನೇಶ್, ಸುರೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.