ಕುಶಾಲನಗರ, ಆ. ೧೨: ಯುವಜನತೆಗೆ ಸ್ಥಳದಲ್ಲೇ ಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಕುಶಾಲನಗರದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡುವ ಚಿಂತನೆಯಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಆಶ್ರಯದಲ್ಲಿ ಕುಶಾಲನಗರ ತಾಲೂಕು ಕಾರ್ಯನಿರ್ವಾಹಕ ಕಚೇರಿ ಹಾಗೂ ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವ ವಿದ್ಯಾನಿಲಯದ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಯುವ ನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನಾಂಗದ ಮೇಲೆ ದೇಶದ ಅಭಿವೃದ್ಧಿ ನಿಂತಿದೆ. ಹೊಸ ತಂತ್ರಜ್ಞಾನ, ಆಧುನಿಕತೆ ಬದಲಾದಂತೆ ಪ್ರತಿಯೊಬ್ಬರೂ ತಮ್ಮ ಕಾರ್ಯಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಕೃಷಿಯಲ್ಲೂ ಕೂಡ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಯುವಜನತೆ ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಬೇಕು. ಪದವಿ ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ನಿರಂತರ ಪರಿಶ್ರಮದೊಂದಿಗೆ ಉದ್ಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ. ಕೊಡಗು ಜಿಲ್ಲೆಗೆ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ತರಬೇಕು ಎಂಬ ಚಿಂತನೆ ಇದೆ. ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿಕೊಡುವ ಉದ್ದೇಶದಿಂದ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಅಗತ್ಯವಾಗಿದೆ ಎಂದರು.

ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿ ಡಾ. ಅಶೋಕ್ ಸಂಗಪ್ಪ ಅಲೂರ ಮಾತನಾಡಿ, ವಿದ್ಯಾವಂತ ನಿರುದ್ಯೋಗಿ ಯುವಜನರು ಉದ್ಯೋಗ ಹುಡುಕಿಕೊಂಡು ಅಲೆಯುವ ಬದಲು ಉದ್ಯೋಗಗಳನ್ನು ಸೃಷ್ಟಿಸುವಂತ ಸೃಷ್ಟಿಕರ್ತ ಆಗಬೇಕು ಎಂದು ಕರೆ ನೀಡಿದರು.

ಕೊಡಗು ಜಿಲ್ಲೆಯ ಉದ್ಯಮಿಗಳೊಂದಿಗೆ ಸಭೆ ನಡೆಸಿ ಸ್ಥಳೀಯ ಯುವಜನತೆಗೆ ಉದ್ಯೋಗದಲ್ಲಿ ಮೊದಲ ಪ್ರಾಶಸ್ತö್ಯ ನೀಡುವಂತಾಗಬೇಕು ಎಂದು ಸಲಹೆ ನೀಡಿದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ವಿದ್ಯಾವಂತ ನಿರುದ್ಯೋಗಿ ಯುವಜನತೆಗೆ ಉದ್ಯೋಗ ಕಲ್ಪಿಸಿಕೊಡಬೇಕು. ಜೊತೆಗೆ ಅರ್ಥಪೂರ್ಣ ಬದುಕು ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶಿಕ್ಷಣ ತಜ್ಞ ಬೆಂಗಳೂರಿನ ಎ.ಹೆಚ್. ಸಾಗರ್ ಅವರು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ತಾರ್ಕಿಕ ಉದ್ಯಮಶೀಲತೆ ಅಭಿವೃದ್ಧಿ ಕುರಿತು ಯುವ ಜನತೆಯೊಂದಿಗೆ ಸಂವಾದ ನಡೆಸಿದರು.

ಸಂಪನ್ಮೂಲ ವ್ಯಕ್ತಿ ಡಿ.ಕೆ.ಮಹೇಶ್ ಕುಮಾರ್ ಕೊಡಗಿನ ಪದವೀಧರರಿಗೆ ವೃತ್ತಿ ಜೀವನ, ಉದ್ಯೋಗಾವಕಾಶಗಳು, ಉದ್ಯಮಶೀಲತೆ ಮತ್ತು ಉನ್ನತ ಶಿಕ್ಷಣ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭ ಕೊಡಗು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪೊ. ಎಂ. ಸುರೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕೆ.ಸಿ. ಭೀಮಯ್ಯ, ಕೆಪಿಸಿಸಿ ಸದಸ್ಯ ಹೆಚ್.ಕೆ. ನಟೇಶ್ ಗೌಡ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಜಿಲ್ಲಾ ಅಧಿಕಾರಿ ಸಿ.ಬಿ. ಮಂಜುನಾಥ್, ಸಹಾಯಕ ಅಧಿಕಾರಿ ಮದನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ, ಎಂ. ಕಿಶೋರ್, ರಫೀಕ್, ಕೃಷ್ಣೇಗೌಡ, ರಾಜಶೇಖರ್, ಅಬ್ದುಲ್ ರಜಾಕ್, ಶ್ರೀನಿವಾಸ್, ವಿವೇಕಾನಂದ, ಎಂ.ಎ. ಆದಂ, ಮತ್ತಿತರರು ಇದ್ದರು.

ಇದೇ ಸಂದರ್ಭ ಶಾಸಕ ಮಂತರ್ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಸೇರಿದಂತೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.