ಸಿದ್ದಾಪುರ, ಆ. ೧೨: ಅಮ್ಮತ್ತಿ ಶಾಖೆಯ ವ್ಯಾಪ್ತಿಯ ಕಣ್ಣಂಗಾಲ, ಯಡೂರು ಹಾಗೂ ಹಚ್ಚಿನಾಡು ಗ್ರಾಮಗಳಲ್ಲಿ ಬೀಡುಬಿಟ್ಟು ಮಾನವರ ಮೇಲೆ ದಾಳಿ ನಡೆಸುತ್ತಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ಶೀಘ್ರದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೀತ ಚೌವ್ಹಾಣ್ ತಿಳಿಸಿದ್ದಾರೆ.
ಇತ್ತೀಚೆಗೆ ಯಡೂರು ಗ್ರಾಮದಲ್ಲಿ ಕಾರ್ಮಿಕನೊಬ್ಬನ ಮೇಲೆ ಕಾಡಾನೆ ದಾಳಿ ನಡೆಸಿ ಮೃತಪಟ್ಟ ಹಿನ್ನೆಲೆಯಲ್ಲಿ ಕಣ್ಣಂಗಾಲ ವ್ಯಾಪ್ತಿಯ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು. ಕಾಡಾನೆ ಹಾವಳಿ ನಿಯಂತ್ರಿಸಿ, ಮಾನವ ಜೀವಹಾನಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಈ ಭಾಗದಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿದ್ಧತೆ ನಡೆಸುತ್ತಿದ್ದಾರೆ. ಮಾನವರ ಮೇಲೆ ದಾಳಿ ನಡೆಸುತ್ತಿರುವ ಸಲಗದ ಚಲನವಲನವನ್ನು ಈಗಾಗಲೇ ಪತ್ತೆಹಚ್ಚಲಾಗಿದ್ದು, ಅದರ ಚಿತ್ರಗಳನ್ನೂ ಸೆರೆಹಿಡಿಯಲಾಗಿದೆ ಎಂದು ಡಿಎಫ್‌ಒ ವಿನೀತ ಮಾಹಿತಿ ನೀಡಿದರು. ಆ.೧೫ರ ಬಳಿಕ ಅಮ್ಮತ್ತಿ ಶಾಖೆಯ ಕಣ್ಣಂಗಾಲ, ಯಡೂರು ಹಾಗೂ ಹಚ್ಚಿನಾಡು ಗ್ರಾಮಗಳಲ್ಲಿ ಒಂಟಿ ಸಲಗ ಸೆರೆಗೆ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ಕಾಡಾನೆಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಅವುಗಳ ಚಲನವಲನದ ಮೇಲೆ ನಿಗಾ ಇರಿಸಲು ಅರಣ್ಯ ಸಿಬ್ಬಂದಿ ಯನ್ನು ನಿಯೋಜಿಸಲಾಗಿದೆ ಎಂದರು. ಇದೇ ವೇಳೆ ಗುಹ್ಯ ಗ್ರಾಮದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಮತ್ತೊಂದು ಕಾಡಾನೆ ಯನ್ನು ಸೆರೆಹಿಡಿಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.