ವೀರಾಜಪೇಟೆ, ಆ. ೧೨: ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವೀರಾಜಪೇಟೆಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.

ಶ್ರೀ ಮಾರಿಯಮ್ಮ ದೇವಸ್ಥಾನದ ಆವರಣದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಪಂಜುಗಳನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯು ಮಾರಿಯಮ್ಮ ದೇವಸ್ಥಾನದಿಂದ ಹೊರಟು, ಮುಖ್ಯ ರಸ್ತೆ, ಬಸ್ ನಿಲ್ದಾಣ, ಮಟನ್ ಮಾರ್ಕೆಟ್ ಜಂಕ್ಷನ್ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಮಹಿಳಾ ಸಮಾಜದಲ್ಲಿ ಸಮಾಪ್ತಿಗೊಂಡಿತು.

ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕ ಜಿ.ಜಿ. ಸಜೀವ, ಸಹ ಸಂಯೋಜಕ ವಿನಾಯಕ ಅಮ್ಮತಿ ಮತ್ತು ವಿನು ಅಮ್ಮತಿ ಸೇರಿದಂತೆ ವೇದಿಕೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆಯವರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.