ಕುಶಾಲನಗರ, ಆ. ೧೩: ಅಪರಿಚಿತ ವ್ಯಕ್ತಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಹಾಗೂ ಅರಣ್ಯ ತಪಾಸಣಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಆತನನ್ನು ರಕ್ಷಿಸಿದ ಘಟನೆ ಕುಶಾಲನಗರ-ಕೊಪ್ಪ ಗಡಿಭಾಗದಲ್ಲಿ ನಡೆದಿದೆ.
ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆ ಬಳಿ ಕಾವೇರಿ ಸೇತುವೆಯ ಕೆಳಭಾಗದಲ್ಲಿ ರಭಸವಾಗಿ ಹರಿಯುತ್ತಿದ್ದ ನದಿಗೆ ವ್ಯಕ್ತಿಯೊಬ್ಬ ಇಳಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ. ಇದನ್ನು ಗಮನಿಸಿದ ಗಡಿಭಾಗದ ಅರಣ್ಯ ತಪಾಸಣಾ ಸಿಬ್ಬಂದಿ ಹಾಗೂ ಸ್ಥಳೀಯ ಶಂಕರ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ಆತನನ್ನು ಮನವೊಲಿಸುವ ಮೂಲಕ ನದಿಯಿಂದ ಮೇಲಕ್ಕೆ ಕರೆತರುವಲ್ಲಿ ಯಶಸ್ವಿಯಾದರು.
ಬಳಿಕ ಆತನ ಕುಟುಂಬ ಸದಸ್ಯರು ಸ್ಥಳಕ್ಕೆ ಆಗಮಿಸಿ ಆತನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಆತ ನದಿಗೆ ಹಾರಲು ಮುಂದಾದ ನಿಖರ ಕಾರಣ ತಿಳಿದುಬಂದಿಲ್ಲ. ವ್ಯಕ್ತಿ ಮದ್ಯ ಸೇವಿಸಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾ ನದಿಗೆ ಇಳಿಯುತ್ತಿದ್ದ ದೃಶ್ಯ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿಸಿತ್ತು. - ಸಿಂಚು