ಸೋಮವಾರಪೇಟೆ, ಆ. ೧೩: ಸಾಲ ಬಾಧೆಯಿಂದ ಕೂಲಿ ಕಾರ್ಮಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾಮದ ಸಿದ್ಧಾರ್ಥ ನಗರದಲ್ಲಿ ನಡೆದಿದೆ.
ಅಲ್ಲಿನ ನಿವಾಸಿ ದಿ. ಪುಟ್ಟಯ್ಯ ಎಂಬವರ ಮಗ ಬಿ.ಪಿ. ಆನಂದ (೩೬) ಆತ್ಮಹತ್ಯೆಗೆ ಶರಣಾದವರು. ಆನಂದ ಅವರು ಖಾಸಗಿ ಫೈನಾನ್ಸ್ ಹಾಗೂ ವಿವಿಧ ಸಂಘ ಸಂಸ್ಥೆಗಳಿAದ ಸಾಲ ಪಡೆದಿದ್ದು, ಮರುಪಾವತಿ ಮಾಡಲು ಅಸಾಧ್ಯವಾದ ಕಾರಣ ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂದು ಪತ್ನಿ ಕಾವ್ಯ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾವ್ಯ ಅವರು ನಿನ್ನೆ ಮಧ್ಯಾಹ್ನ ಅನತಿ ದೂರದಲ್ಲಿರುವ ತವರುಮನೆಗೆ ತೆರಳಿದ್ದು, ಸಂಜೆ ೪.೪೫ರ ಸುಮಾರಿಗೆ ಪತಿಯ ಮನೆಗೆ ವಾಪಸ್ ಆದ ಸಂದರ್ಭ ಮನೆಯೊಳಗಿನ ಕೊಠಡಿಯೊಳಗೆ ಚೂಡಿದಾರದ ವೇಲ್‌ನಿಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬAದಿದೆ.
ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಿದ್ದು, ಅವರು ಆಗಮಿಸಿ ವೇಲ್ ತುಂಡರಿಸಿ ಆಸ್ಪತ್ರೆಗೆ ಸಾಗಿಸಬೇಕೆನ್ನುವಷ್ಟರಲ್ಲಿ, ಅಸುನೀಗಿರುವುದು ದೃಢಪಟ್ಟಿದೆ. ಇಂದು ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ, ಠಾಣಾಧಿಕಾರಿ ಖತೀಜಾ, ಮುಖ್ಯಪೇದೆ ಸತೀಶ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಮೃತ ಆನಂದ ಅವರು ಪತ್ನಿ ಕಾವ್ಯ ಸೇರಿದಂತೆ ಎರಡು ವರ್ಷ ಪ್ರಾಯದ ಪುತ್ರಿಯನ್ನು ಅಗಲಿದ್ದಾರೆ.