ಮುಳ್ಳೂರು, ಆ. ೧೫: ಸಮೀಪದ ಆಲೂರು - ಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆ ವತಿಯಿಂದ ಹಿತ್ಲುಗದ್ದೆ ಗ್ರಾಮದ ವಿಜಯ್ ಅವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಸಂಪತ್, ಸಮಾಜ ಸೇವೆ ಮತ್ತು ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ರೋಟರಿ ಸಂಸ್ಥೆ ಸಮಾಜದಲ್ಲಿ ಜನರ ಮನ್ನಣೆ ಗಳಿಸುತ್ತಿದೆ. ರೋಟರಿ ಸಂಸ್ಥೆಯು ಶಿಕ್ಷಣ, ಆರೋಗ್ಯ, ಪರಿಸರ, ಅರಣ್ಯ ಹಾಗೂ ಸಮಾಜದ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ. ಈ ಮೂಲಕ ರೋಟರಿ ಸಂಸ್ಥೆಯ ಸದಸ್ಯರು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಆಲೂರು - ಸಿದ್ದಾಪುರ ರೋಟರಿ ಸಂಸ್ಥೆ ಈ ಭಾಗದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ಪೈಕಿ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಕಾರ್ಯಕ್ರಮವು ಒಂದಾಗಿದೆ ಎಂದು ಹೇಳಿದರು.
ಈ ಸಂದರ್ಭ ರೋಟರಿ ಕ್ಲಬ್ ಕಾರ್ಯದರ್ಶಿ ಪಿ.ಕೆ. ಸತೀಶ್ ಕುಮಾರ್, ಮುಂದಿನ ಸಾಲಿನ ಅಧ್ಯಕ್ಷ ವಿಜಯ್, ರೋಟರಿ ಕ್ಲಬ್ ಪ್ರಮುಖರಾದ ಉದಯ್ ಕುಮಾರ್, ದಯಾನಂದ್, ಕಿರಣ್ ಮತ್ತು ರೋಟರಿ ಸದಸ್ಯರು ಹಾಜರಿದ್ದರು.