(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಸೆ. ೧೬: ರಾಜ್ಯದಲ್ಲಿ ೯ ವಿಶ್ವವಿದ್ಯಾಲಯಕ್ಕೆ ರಾಜ್ಯದ ಮಹನೀಯರ ಹೆಸರನ್ನು ನಾಮಕರಣ ಮಾಡುವ ನಿಟ್ಟಿನಲ್ಲಿ ಈಗಾಗಲೇ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೊಡಗು ವಿಶ್ವವಿದ್ಯಾಲಯಕ್ಕೆ ಕಾವೇರಿ, ದೊಡ್ಡವೀರ ರಾಜೇಂದ್ರ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರು ಹೆಸರಿನ ಪ್ರಸ್ತಾವನೆ ಸಲ್ಲಿಕೆಯಾಗಿದೆ. ರಾಜ್ಯದಲ್ಲಿ ಈಗಾಗಲೇ ಹಲವು ವಿಶ್ವವಿದ್ಯಾಲಯಕ್ಕೆ ಹಲವು ಮಹನೀಯರ ಹೆಸರನ್ನು ನಾಮಕರಣ ಮಾಡಲಾಗಿದೆ. ಅದರೊಂದಿಗೆ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಪ್ರಯತ್ನ ಕೂಡ ಆಗಲಿದೆ.
ಕರ್ನಾಟಕದಲ್ಲಿ ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಸರ್ ಎಂ. ವಿಶ್ವೇಶ್ವರಯ್ಯ, ನೃಪತುಂಗ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ರಾಷ್ಟçಕವಿ ಕುವೆಂಪು, ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್, ಮಹರ್ಷಿ ವಾಲ್ಮೀಕಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ಅವರ ಹೆಸರಲ್ಲಿ ವಿಶ್ವವಿದ್ಯಾಲಯಗಳಿವೆ. ಇದೀಗ ೯ ವಿಶ್ವವಿದ್ಯಾಲಯಗಳಿಗೆ ಮಹನೀಯರ ಹೆಸರು ನಾಮಕರಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರಸ್ತಾವನೆ ಸಲ್ಲಿಸಿರುವ ಎರಡು ಹೆಸರಿನಲ್ಲಿದೆ ಕಾಲೇಜು
ಕೊಡಗು ವಿಶ್ವವಿದ್ಯಾಲಯದ ನೂತನ ಹೆಸರಿಗೆ ಪ್ರಸ್ತಾವನೆ ಸಲ್ಲಿಸಿರುವ ಕಾವೇರಿ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹೆಸರಿನಲ್ಲಿ ಜಿಲ್ಲೆಯಲ್ಲಿ ಕಾಲೇಜು ಇದೆ. ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಹಾಗೂ ವೀರಾಜಪೇಟೆ ಮತ್ತು ಪೊನ್ನಂಪೇಟೆಯಲ್ಲಿ ಕಾವೇರಿ ಹೆಸರಿನಲ್ಲಿ ವಿದ್ಯಾಸಂಸ್ಥೆಗಳು ಇದೆ. ಮತ್ತೆ ಈ ಎರಡು ಹೆಸರಿನಲ್ಲಿ ಯಾವುದಾದರೂ ಒಂದನ್ನು ನಾಮಕರಣ ಮಾಡಿದರೆ ಜನರಿಗೆ ಗೊಂದಲವುAಟಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮತ್ತೊಂದೆಡೆ ಪ್ರಸ್ತಾವನೆ ಸಲ್ಲಿಸಿರುವ ಮೂರು ಹೆಸರು ಕೂಡ ಸೂಕ್ತ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ಕೊಡಗಿನಲ್ಲಿ ಹುಟ್ಟಿ ಇಡೀ ದಕ್ಷಿಣ ಭಾರತಕ್ಕೆ ನೀರುಣಿಸುತ್ತಿರುವ ಜೀವ ನದಿ ಕಾವೇರಿ ಹೆಸರು ವಿಶ್ವವಿದ್ಯಾಲಯಕ್ಕೆ ಇಡಬೇಕೆಂಬ ಜನಾಭಿಪ್ರಾಯ ಹೆಚ್ಚಿಗೆ ಇದೆ. ಮತ್ತೊಂದೆಡೆ ಸ್ವಾತಂತ್ರö್ಯ ಭಾರತದ ಮೊದಲ ದಂಡನಾಯಕ ಕೊಡಗಿನ ಹೆಮ್ಮೆಯ ಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಹೆಸರು ಕೂಡ ವಿಶ್ವವಿದ್ಯಾಲಯಕ್ಕೆ ಸೂಕ್ತವಾಗಿದೆ. ಅದಲ್ಲದೇ ಕೊಡಗು ಸಾಮ್ರಾಜ್ಯಕ್ಕೆ ಅಪಾರ ಕೊಡುಗೆ ನೀಡಿರುವ ದೊಡ್ಡ ವೀರರಾಜೇಂದ್ರ (೧೭೮೦-೧೮೦೯) ಹಾಲೇರಿ ರಾಜಮನೆತನದ ೯ನೇ ದೊರೆಯಾಗಿದ್ದರು. ಕೊಡಗು ಒಂದು ಸಂಸ್ಥಾನವಾಗಿ ಬೆಳೆಯುವುದಕ್ಕೆ ಮತ್ತು ಕೊಡಗಿನ ಪ್ರತ್ಯೇಕ ಅಸ್ತಿತ್ವಕ್ಕೆ ಅವರ ಕೊಡುಗೆ ಅಪಾರವಾಗಿದೆ. ವೀರ-ರಾಜೇಂದ್ರಪೇಟೆ (ವೀರಾಜಪೇಟೆ) ಸ್ಥಾಪಿಸಿದ್ದರು .ಕಾವೇರಿ,ದೊಡ್ಡ ವೀರ ರಾಜೇಂದ್ರ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಹೆಸರುಗಳನ್ನು ಈಗಾಗಲೇ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಹಿಂದೆ ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ನಾಮಕರಣ ವಿಷಯದಲ್ಲಿ ರಾಜಕೀಯ ಜಟಾಪಟಿ ಕೂಡ ನಡೆದಿತ್ತು. ಕೊಡಗು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುವ ಮೂರು ಹೆಸರಿನಲ್ಲಿ ರಾಜಕೀಯವಾಗಿ ಯಾವುದೇ ಗುದ್ದಾಟ ನಡೆಯಲ್ಲ. ಆದರೆ ಈ ಮೂರು ಹೆಸರಿನಲ್ಲಿ ಯಾವುದೇ ಸೂಕ್ತ ಎಂಬುದು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಲಿದೆ.