ಮಡಿಕೇರಿ, ಸೆ. ೧೬: ಕಾವೇರಿ ತೀರ್ಥೋದ್ಭವ ಆಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಭಕ್ತಾದಿಗಳಿಗೆ ಯಾವುದೇ ಗೊಂದಲ ಉಂಟಾಗದAತೆ ಎಚ್ಚರಿಕೆ ವಹಿಸಬೇಕೆಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎ.ಎಸ್. ಪೊನ್ನಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಾಗಮಂಡಲದ ಹಳೆಮುಡಿ ಕಟ್ಟಡದಲ್ಲಿ ಎ.ಎಸ್. ಪೊನ್ನಣ್ಣ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

ವಿವಿಧ ಇಲಾಖಾ ಅಧಿಕಾರಿಗಳಿಂದ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು. ಸ್ಥಳೀಯರು, ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಮನ ಸೆಳೆದರು.

ಆರಂಭದಲ್ಲಿ ಮಾತನಾಡಿದ ಶಾಸಕರು, ಅದ್ದೂರಿಯಾಗಿ ತೀರ್ಥೋದ್ಭವ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಯಾವುದೇ ತೊಂದರೆಗಳು ಸ್ಥಳೀಯರಿಗೆ, ಭಕ್ತಾದಿಗಳಿಗೆ ಆಗಬಾರದು. ಭಕ್ತರ ಸಲಹೆಗಳನ್ನು ಪರಿಗಣಿಸಿ ಮುಂದುವರೆಯಲಾಗುವುದು ಎಂದರು.

ಪೊಲೀಸ್ ಭದ್ರತೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ಈ ವರ್ಷ ರಾತ್ರಿ ವೇಳೆಯಲ್ಲಿ ತೀರ್ಥೋದ್ಭವ ಘಟಿಸುವ ಹಿನ್ನೆಲೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುವುದು. ಸೂಕ್ತ ಲೈಟಿಂಗ್ ವ್ಯವಸ್ಥೆ, ಸಿಸಿ ಕ್ಯಾಮರ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು. ಪಾರ್ಕಿಂಗ್ ವ್ಯವಸ್ಥೆ ಸಮರ್ಪಕಗೊಳಿಸಲಾಗುವುದು. ತಲಕಾವೇರಿ ತೀರ್ಥ ಕುಂಡಿಕೆ ಬಳಿ ಭದ್ರತೆಗೆ ಹೆಚ್ಚಿನ ನಿಗಾ ವಹಿಸಲಾಗುವುದು. ದೇವಾಲಯ ಬಳಿ ವಾಹನ ನಿಲುಗಡೆಗೆ ಜಾಗ ನಿಗದಿ ಮಾಡಲಾಗಿದ್ದು, ಮೆರವಣಿಗೆಗೂ ಸೂಕ್ತ ಭದ್ರತೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಶಾಸಕ ಪೊನ್ನಣ್ಣ ಮಾತನಾಡಿ, ಈ ಹಿಂದೆ ಪಾದಯಾತ್ರೆಯಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಕಳೆದ ವರ್ಷ ಅದನ್ನು ಸರಿಪಡಿಸಲಾಗಿದೆ. ಈ ಬಾರಿಯೂ ಯಾವುದೇ ರೀತಿಯಲ್ಲೂ ಸಂಚಾರಕ್ಕೆ ಸಮಸ್ಯೆ ಏರ್ಪಡದಂತೆ ಕ್ರಮಕೈಗೊಳ್ಳಲು ಎಸ್ಪಿಗೆ ಸೂಚಿಸಿದರು.

ಉಚಿತ ಬಸ್ ಸೇವೆ ಮುಂದುವರಿಕೆ

ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕರು ಮಾತನಾಡಿ, ತೀರ್ಥೋದ್ಭವ ಸಂದರ್ಭ ತಲಕಾವೇರಿಗೆ ಕಳೆದ ವರ್ಷ ೨೫ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವರ್ಷ ಅಗತ್ಯ ಬಸ್ ಸೇವೆ ನೀಡಲಾಗುವುದು. ಅಗತ್ಯವಿದ್ದಲ್ಲಿ ಹೆಚ್ಚಿಗೆ ಬಸ್‌ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಭಾಗಮಂಡಲದಿAದ ತಲಕಾವೇರಿಗೆ ೨ ದಿನಗಳ ಉಚಿತ ಬಸ್ ಸೇವೆ ಒದಗಿಸಬೇಕೆಂದು ಶಾಸಕರು ಸೂಚಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಹೊಸೂರು ಸತೀಶ್ ಮಾತನಾಡಿ, ತೀರ್ಥೋದ್ಭವದ ಮರುದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆ ದಿನದಲ್ಲಿಯೂ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು. ತೀರ್ಥೋದ್ಭವ ನಂತರ ನಿರ್ಲಕ್ಷö್ಯ ವಹಿಸದೆ ಕಟ್ಟೆಚ್ಚರ ವಹಿಸಬೇಕೆಂದ ಅವರು, ತಣ್ಣಿಮಾನಿ ಮೂಲಕ ರಸ್ತೆ ಸಂಪರ್ಕವಿದ್ದು, ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿದರೆ ವಾಹನ ದಟ್ಟಣೆ ನಿಯಂತ್ರಣ ಮಾಡಬಹುದು. ಸಂಘರ್ಷವನ್ನು ತಪ್ಪಿಸಬಹುದು. ರಸ್ತೆ ದುರಸ್ತಿ ಮಾಡಿ ಕ್ರಮಕೈಗೊಳ್ಳಬಹುದು ಎಂದು ಸಲಹೆ ನೀಡಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾತನಾಡಿ, ತಣ್ಣಿಮಾನಿ ಮೂಲಕ ತಲಕಾವೇರಿಗೆ ೪ ಕಿ.ಮೀ. ರಸ್ತೆ ಇದ್ದು, ದುರಸ್ತಿಗೆ ಹೆಚ್ಚಿನ ಹಣದ ಅವಶ್ಯಕತೆಯಿದೆ. ರಸ್ತೆಯೂ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದರು.

ಇದಕ್ಕೆ ಸ್ಥಳೀಯರು ಆಕ್ಷೇಪಿಸಿ ಈಗಾಗಲೇ ರಸ್ತೆಯಲ್ಲಿ ವಾಹನ ಸಂಚಾರವಾಗುತ್ತಿದ್ದು, ರಸ್ತೆ ದುರಸ್ತಿಯಾದರೆ ಅನುಕೂಲವಾಗಲಿದೆ ಎಂದರು.

ತಲಕಾವೇರಿ - ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ವಾರಾಂತ್ಯ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ)ಹಿನ್ನೆಲೆ ವಾಹನ ದಟ್ಟಣೆ ಹೆಚ್ಚಾಗುತ್ತದೆ. ತೀರ್ಥೋದ್ಭವದಂದು ಇರುವಷ್ಟೆ ಭದ್ರತೆ ಇರಬೇಕೆಂದರು.

ಮರದ ಕೊಂಬೆ ತೆರವಿಗೆ ಸಕಾಲದಲ್ಲಿ ಅನುಮತಿ

ಡಿ.ಎಫ್.ಓ. ಅಭಿಷೇಕ್ ಮಾತನಾಡಿ, ರಾತ್ರಿ ವೇಳೆ ಆಚರಣೆ ಇರುವುದರಿಂದ ಹೆಚ್ಚಿನ ಗಸ್ತು ವಹಿಸಲಾಗುವುದು. ರಸ್ತೆ ಬದಿ ಕಾಡು ಹಾಗೂ ಮರದ ಕೊಂಬೆ ಕಡಿಯಲು ಸಕಾಲದಲ್ಲಿ ಅನುಮತಿಯನ್ನು ನೀಡಲಾಗುವುದು ಎಂದು ಹೇಳಿದರು.

ಈ ವಿಷಯದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಕರಿಕೆ-ಭಾಗಮಂಡಲ ರಸ್ತೆಯಲ್ಲಿ ಅಪಾಯಕಾರಿ ಮರಗಳ ಕೊಂಬೆ ತೆರವು ಮಾಡಬೇಕು ಎಂದರು. ಅಪಾಯಕಾರಿ ಕೊಂಬೆ ಹಾಗೂ ರಸ್ತೆಬದಿ ಗಿಡಗಂಟಿ ಕಡಿಯುವ ವಿಷಯ ಪ್ರತಿವರ್ಷ ಪ್ರಸ್ತಾಪವಾಗುತ್ತದೆ. ಆದರೆ, ಸಮಸ್ಯೆ ಬಗೆಹರಿದಿಲ್ಲ ಎಂದು ಶಾಸಕ ಪೊನ್ನಣ್ಣ ಅತೃಪ್ತಿ ವ್ಯಕ್ತಪಡಿಸಿದರು.

ಭಾಗಮಂಡಲ, ಮಡಿಕೇರಿ, ತಲಕಾವೇರಿ, ಚೆಯ್ಯಂಡಾಣೆ ರಸ್ತೆ ಬದಿ ಕಾಡು ತೆರವಿಗೆ ತಕ್ಷಣ ಕ್ರಮವಹಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಗಿರೀಶ್, ಪ್ರಭು ಹೇಳಿದರು.

ಶೀಘ್ರ ಟೆಂಡರ್ ಮಾಡಿ ಅ. ೧೦ರೊಳಗೆ ಕೊಂಬೆ ತೆರವು, ಕಾಡು ಕಡಿಯಲು ಕ್ರಮವಹಿಸಬೇಕೆಂದು ಪೊನ್ನಣ್ಣ ನಿರ್ದೇಶಿಸಿದರು.

ಕಾವೇರಿ ನೀರಾವರಿ ನಿಗಮದ ಅಧಿಕಾರಿ ಮಾತನಾಡಿ, ತ್ರಿವೇಣಿ ಸಂಗಮಕ್ಕೆ ಹೂಳೆತ್ತಲು ಕ್ರಮವಹಿಸಲಾಗುವುದು ಎಂದರು.

ಮೇಲ್ಸೇತುವೆಯಲ್ಲಿ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಸಂಪರ್ಕವಿಲ್ಲ. ಹಾಗಾಗಿ ಸೋಲಾರ್ ದೀಪ ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ರಾಮಚಂದ್ರ ಮಾತನಾಡಿ, ವಿದ್ಯುತ್ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಲಾಗಿದೆ. ಮೂರ್ನಾಡಿನಿಂದ ವಿದ್ಯುತ್ ಜಾಲ ಬಲವರ್ಧನೆ ಮಾಡಲಾಗಿದೆ. ವಿದ್ಯುತ್ ಅಡಚಣೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ತಲಕಾವೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಮುಚ್ಚಲು ತಕ್ಷಣ ಕ್ರಮವಹಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಿವರಿಸಿದರು.

ಗೌಡ ಸಮಾಜಗಳ ಒಕ್ಕೂಟ ಅಧ್ಯಕ್ಷ ಆನಂದ್ ಕರಂದ್ಲಾಜೆ ಮಾತನಾಡಿ, ಸರ್ವಋತು ರಸ್ತೆ ಮಾಡಬೇಕು ಎಂದು ಕೋರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಮಾತನಾಡಿ, ೩ ಆ್ಯಂಬ್ಯುಲೆನ್ಸ್, ವೀಲ್ ಚೇರ್, ತಜ್ಞ ವೈದ್ಯರನ್ನು ಆಚರಣೆ ಸಂದರ್ಭ ನಿಯೋಜಿಸಲಾಗುವುದು ಎಂದು ಹೇಳಿದರು.

ವಾರ್ತಾ ಮತ್ತು ಪ್ರಚಾರ ಇಲಾಖೆ ಉಪನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ, ಕೊಡವ ಹಾಗೂ ಅರೆಭಾಷೆ ಅಕಾಡೆಮಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ವಿಭಿನ್ನ ಜನಾಂಗಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಪೊನ್ನಣ್ಣ ತಿಳಿಸಿದರು.

ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್ ಮಾತನಾಡಿ, ಮುಡಿಶೆಡ್ ನವೀಕರಣಕ್ಕೆ ಕ್ರಮ ವಹಿಸಲಾಗಿದೆ ಎಂದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಮುಡಿಶೆಡ್ ಕಟ್ಟಡವನ್ನು ವಾಣಿಜ್ಯ ಚಟುವಟಿಕೆಗೆ ಬಳಸಬಾರದು. ಸಭಾಂಗಣವಾಗಿ ಪರಿವರ್ತಿಸಿ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.

ಕುಂಡಿಕೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಚೆಯ್ಯಂಡ ಸತ್ಯ ಸಭೆಯ ಗಮನ ಸೆಳೆದರು.

ಎಂ.ಬಿ. ದೇವಯ್ಯ ಮಾತನಾಡಿ, ಮಡಿಕೇರಿ ಭಗವತಿ ದೇವಾಲಯದ ವತಿಯಿಂದ ಕಳೆದ ಹಲವು ವರ್ಷದಿಂದ ದುಡಿಕೊಟ್ಟ್ ಪಾಟ್ ಮೆರವಣಿಗೆ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಇಲಾಖೆಯಿಂದ ಅಡ್ಡಿ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಬೇಕು ಹಾಗೂ ಪಾಸ್ ಒದಗಿಸಬೇಕೆಂದು ಒತ್ತಾಯಿಸಿದರು.

ಗೊಂದಲ ಉಂಟಾಗಬಾರದೆAಬ ಉದ್ದೇಶದಿಂದ ಪಾಸ್ ವ್ಯವಸ್ಥೆ ಮಾಡುತ್ತಿಲ್ಲ. ದುಡಿಕೊಟ್ಟ್ ಪಾಟ್ ತಂಡದ ಪ್ರವೇಶಾತಿಗೆ ಕ್ರಮವಹಿಸಲಾಗುವುದು ಎಂದು ಪೊನ್ನಣ್ಣ ಹೇಳಿದರು.

ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಒಂದು ತಿಂಗಳ ಕಾಲ ಏಕೀಕರಣ ರಂಗದಿAದ ಅನ್ನದಾನ ಕಲ್ಪಿಸಲಾಗುವುದು ಎಂದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಳೆದ ಬಾರಿ ನ್ಯೂನ್ಯತೆ ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಇದಕ್ಕೆ ಸಭೆ ಪೂರಕವಾಗಿದೆ. ಜನರ ಭಾವನೆಗೆ ಪೂರಕವಾಗಿ ಅಧಿಕಾರಿಗಳು ಸ್ಪಂದಿಸಬೇಕು. ಅಧಿಕಾರಿಗಳು ಚರ್ಚೆಯಾದ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಆಚರಣೆಯಲ್ಲಿ ಯಾವುದೇ ತೊಂದರೆ, ಗೊಂದಲವಾಗಬಾರದು. ಭಕ್ತರಿಗೆ ತೊಂದರೆ ಮಾಡಿ ಆಚರಣೆ ಮಾಡುವುದರಲ್ಲಿ ಅರ್ಥವಿಲ್ಲ. ಪ್ರತಿವರ್ಷವೂ ಸುಧಾರಿಸಿಕೊಳ್ಳುವ ಅಂಶಗಳಿರುತ್ತವೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಡಿವೈಎಸ್‌ಪಿ ಸೂರಜ್, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ತಹಶೀಲ್ದಾರ್ ಶ್ರೀಧರ್, ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್, ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ, ಭಾಗಮಂಡಲ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಹಾಜರಿದ್ದರು.