ಕುಶಾಲನಗರ, ಅ. ೨೯: ಜಿಲ್ಲೆಯ ವಾಣಿಜ್ಯ ನಗರಿ ಹಾಗೂ ಪ್ರವಾಸಿಗರ ಕೇಂದ್ರ ಎಂದೇ ಖ್ಯಾತಿ ಪಡೆದಿರುವ ಕುಶಾಲನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಟೇಲ್ ಆಹಾರದ ಬೆಲೆಗಳು ಗಗನಕ್ಕೇರಿವೆ. ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಖಾಸಗಿ ಹೊಟೇಲ್‌ಗಳಲ್ಲಿ ಊಟ, ತಿಂಡಿ ಸಾಮಾನ್ಯ ಜನರಿಗೆ ದುಬಾರಿಯಾಗಿದೆ. ಇಂತಹ ಸಂದರ್ಭದಲ್ಲಿ ನಗರದ ಹೃದಯಭಾಗದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿಯ ‘ಇಂದಿರಾ ಕ್ಯಾಂಟಿನ್’ ಬಡವರು, ಶ್ರಮಿಕರು ಮತ್ತು ಪ್ರವಾಸಿಗರ ಪಾಲಿಗೆ ಸಂಜೀವಿನಿಯಾಗಿದೆ.

ಕೇವಲ ಹತ್ತು ರೂಪಾಯಿಗೆ ಶುಚಿ-ರುಚಿಯಾದ ಆಹಾರ ನೀಡುವ ಮೂಲಕ ಈ ಕ್ಯಾಂಟಿನ್ ಹಸಿದ ಹೊಟ್ಟೆಗಳಿಗೆ ಆಸರೆಯಾಗಿದೆ.

ಇಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರವನ್ನು ಒದಗಿಸಲಾಗುತ್ತಿದೆ: ಬೆಳಿಗ್ಗೆ (೭:೩೦ ರಿಂದ ೧೦:೦೦): ಕೇವಲ ೧೦ ರೂಪಾಯಿಗೆ ೩ ಇಡ್ಲಿ, ಸಾಂಬಾರು ಮತ್ತು ಚಟ್ನಿ. ಮಧ್ಯಾಹ್ನ (೧೨:೩೦ ರಿಂದ ೩:೦೦): ೧೦ ರೂಪಾಯಿಗೆ ಅನ್ನ, ಸಾಂಬಾರು, ಗೊಜ್ಜು ಅಥವಾ ೨ ಚಪಾತಿ ಮತ್ತು ಗೊಜ್ಜು. ರಾತ್ರಿ (೬:೦೦ ರಿಂದ ೯:೦೦): ೧೦ ರೂಪಾಯಿಗೆ ಬಿಸಿ ಬಿಸಿ ಮುದ್ದೆ ಅಥವಾ ಅನ್ನ-ಸಾಂಬಾರು.

ಗ್ರಾಹಕರಿಗೆ ಅನುಕೂಲವಾಗುವಂತೆ ವಾರದ ದಿನಗಳಲ್ಲಿ ಸಿಗುವ ಆಹಾರ ಪದಾರ್ಥಗಳ ಸವಿವರಗಳ ಪಟ್ಟಿಯನ್ನು ಕ್ಯಾಂಟೀನ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ಪ್ರದರ್ಶಿಸಲಾಗಿದೆ.

ಯಾರಿಗೆಲ್ಲಾ ಅನುಕೂಲ?

ಬಸ್ ನಿಲ್ದಾಣದ ಸಮೀಪದಲ್ಲೇ ಇರುವುದರಿಂದ ಆಟೋ ಚಾಲಕರು, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು, ಖಾಸಗಿ ಸಂಸ್ಥೆಗಳ ನೌಕರರು, ದಿನಗೂಲಿ ಕಾರ್ಮಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ದೂರದ ಊರುಗಳಿಂದ ಬರುವ ಪ್ರಯಾಣಿಕರಿಗೆ ಇದು ವರದಾನವಾಗಿದೆ. ಪ್ರತಿದಿನ ಖಾಯಂ ಆಗಿ ಎರಡು ಅಥವಾ ಮೂರು ಹೊತ್ತು ಇಲ್ಲಿಗೇ ಬಂದು ಊಟ ಮಾಡುವ ನೂರಾರು ಗ್ರಾಹಕರಿದ್ದಾರೆ.

ಸೀಮಿತ ಸೇವೆ - ಅಪಾರ ತೃಪ್ತಿ..

ಬೆಳಗಾವಿ ಜಿಲ್ಲೆಯ ಯಾದವಾಡ ಮೂಲದ ಲಕ್ಷ್ಮಿ ಅವರ ನೇತೃತ್ವದಲ್ಲಿ ಒಟ್ಟು ಐದು ಮಂದಿ ಸಿಬ್ಬಂದಿಗಳು ಕಳೆದ ಒಂದು ವರ್ಷದಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಪ್ರತೀ ಹೊತ್ತಿಗೆ ಕೇವಲ ೩೦೦ ಪ್ಲೇಟ್‌ಗಳಿಗೆ ಮಾತ್ರ ಸೇವೆ ಲಭ್ಯವಿದ್ದು, ಬರುವ ಪ್ರತಿಯೊಬ್ಬ ಗ್ರಾಹಕರಿಗೂ ಪ್ರೀತಿಯಿಂದ ಆಹಾರ ಉಣಬಡಿಸಲಾಗುತ್ತಿದೆ.

“ಕುಶಾಲನಗರ ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರತಿದಿನ ದೇವರ ಮುಂದೆ ನೈವೇದ್ಯ ಅರ್ಪಿಸಿದ ನಂತರವೇ, ಗ್ರಾಹಕರಿಗೆ ಕೇವಲ ೧೦ ರೂಪಾಯಿಗೆ ತೃಪ್ತಿಯ ಮತ್ತು ಶುದ್ಧ ಭೋಜನವನ್ನು ಉಣಬಡಿಸುವ ಮೂಲಕ ಶ್ರದ್ಧೆ, ಭಕ್ತಿ ಮತ್ತು ಸೇವೆಯನ್ನು ಸಮರ್ಪಿಸುತ್ತಿದ್ದಾರೆ.”

ಕ್ಯಾಂಟಿನ್‌ನಲ್ಲಿ ಕೇವಲ ಕಡಿಮೆ ಬೆಲೆ ಮಾತ್ರವಲ್ಲದೆ, ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. “ದುಬಾರಿ ಹೊಟೇಲ್‌ಗಳಿಗೆ ಹೋಗಲು ಸಾಧ್ಯವಿಲ್ಲದ ನಮಗೆ, ಈ ಕ್ಯಾಂಟಿನ್ ವರಪ್ರಸಾದದ್ದಂತೆ. ಕೇವಲ ೧೦ ರೂಪಾಯಿಗೆ ಹೊಟ್ಟೆ ತುಂಬುತ್ತದೆ” ಎಂದು ಅಲ್ಲಿಗೆ ಬರುವ ಗ್ರಾಹಕರು ಸಂತೃಪ್ತಿ ವ್ಯಕ್ತಪಡಿಸುತ್ತಾರೆ. ಹಸಿವು ನೀಗಿಸಿಕೊಂಡ ಗ್ರಾಹಕರ ಮುಖದಲ್ಲಿ ಮೂಡುವ ನಗು, ಅಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೂ ಆತ್ಮತೃಪ್ತಿ ತಂದಿದೆ.