ಚೆಟ್ಟಳ್ಳಿ, ಅ. ೨೯ : ವೀರಾಜಪೇಟೆಯ ಹಿರಿಯ ವಕೀಲ ಎಂ.ಯು. ಜಗದೀಶ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗೆ ರೂ. ೫೦ ಸಾವಿರ ಪಾವತಿಸುವಂತೆ ವೀರಾಜಪೇಟೆಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

೨೦೨೧ರ ಜನವರಿ ೧೩ರಂದು ವಕೀಲ ಜಗದೀಶ್ ಅವರು ಕಚೇರಿಯಿಂದ ಹೊರಬರುತ್ತಿದ್ದ ಸಂದರ್ಭ ಕುಟ್ಟ ಗ್ರಾಮದ ರೋಷನ್ ಕಾರ್ಯಪ್ಪ ಎಂಬಾತ ದೊಣ್ಣೆಯಿಂದ ಏಕಾಏಕಿ ಹಲ್ಲೆ ನಡೆಸಿದ್ದ. ಗಾಯಗೊಂಡ ಜಗದೀಶ್ ಅವರು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಕುರಿತು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಆರೋಪಿಯನ್ನು ಬಂಧಿಸಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ವೀರಾಜಪೇಟೆ ವಕೀಲರ ಸಂಘವು ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಒಂದು ದಿನದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ನಟರಾಜ್ ಅವರು, ವಕೀಲ ಜಗದೀಶ್ ಅವರಿಗೆ ರೂ. ೫೦ ಸಾವಿರ ಪಾವತಿಸುವಂತೆ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿ ೪೫ ದಿನಗಳ ಕಾಲ ಬಂಧನದಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನ್ಯಾಯಾಲಯದ ಆದೇಶದಂತೆ ಆರೋಪಿ ರೂ. ೫೦ ಸಾವಿರ ಮೊತ್ತವನ್ನು ಪಾವತಿಸಿದ್ದಾರೆ.