ಭಾಗಮಂಡಲ, ಜು. ೭: ಕಂದಾಯ ಇಲಾಖೆಯ ಅಧಿಕಾರಿಗಳು ಆರ್‌ಟಿಸಿಯಲ್ಲಿ ಕುಟುಂಬ ಸದಸ್ಯರ ಹೆಸರು ತೆಗೆದುಹಾಕಿದ್ದಾರೆ ಎಂದು ಆರೋಪಿಸಿ ಭಾಗಮಂಡಲದ ನಾಡಕಚೇರಿಗೆ ಸೋಮವಾರ ತೆರಳಿದ ಅಮೆ ಕುಟುಂಬದ ೪೦ ಸದಸ್ಯರು ಆರ್‌ಟಿಸಿಯಲ್ಲಿ ಬಾಲಕೃಷ್ಣ ಅವರ ಹೆಸರು ಇಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯರಾದ ಅಮೆ ಬಾಲಕೃಷ್ಣ ಮಾತನಾಡಿ, ಭಾಗಮಂಡಲ ನಾಡ ಕಚೇರಿ ವ್ಯಾಪ್ತಿಯ ತಾವೂರು ಗ್ರಾಮದ ಸರ್ವೆ ನಂಬರ್ ೬೦/೧ ಅಮೆ ಕುಟುಂಬಸ್ಥರಿಗೆ ಸೇರಿದ ಗದ್ದೆ ಜಾಗವಾಗಿದ್ದು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ . ಕುಟುಂಬದ ಸದಸ್ಯರು ಜಮಾಬಂದಿಗೆ ಸೇರಿದ್ದಾರೆ. ೨೦೦೧ರಲ್ಲಿ ಆರ್‌ಟಿಸಿ ಬಂದಿತ್ತು. ಇತ್ತೀಚೆಗೆ ಕುಟುಂಬದ ಬಾಲಕೃಷ್ಣ ಹೆಸರÀನ್ನು ತೆಗೆದುಹಾಕಿದ್ದು ಸಮೀಪದ ಸುಳ್ಯದ ತೊಡಿಕಾನದಲ್ಲಿರುವ ಕುಟುಂಬದ ಆಸ್ತಿಗೆ ಸಂಬAಧಪಡದೇ ಇರುವ ನಾಲ್ವರು ಸದಸ್ಯರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ.

ಆರ್‌ಟಿಸಿಗೆ ಯಾವುದೇ ವ್ಯಕ್ತಿಯ ಹೆಸರನ್ನು ಸೇರಿಸಬೇಕಿದ್ದಲ್ಲಿ ಕುಟುಂಬ ಸದಸ್ಯರ ಒಪ್ಪಿಗೆ ಪತ್ರ ಬೇಕು. ಇದನ್ನು ಪಡೆಯದೆ ಕಂದಾಯ ಇಲಾಖೆಯ ಅಧಿಕಾರಿಗಳು ಹೆಸರನ್ನು ಸೇರ್ಪಡೆಗೊಳಿಸಿದ್ದು ಹೇಗೆ ಎಂದು ಪ್ರಶ್ನಿಸಿದರು.

ತಾವೂರು ಗ್ರಾಮದ ಆಸ್ತಿ ೬/೨ ರಲ್ಲಿ ಪಟ್ಟೆದಾರ ಮುದ್ದಪ್ಪ ಅವರ ಹೆಸರಿನಲ್ಲಿದ್ದ ಜಾಗವನ್ನು ಸ್ಥಳೀಯ ಮುಸ್ಲಿಂ ಸಮುದಾಯಕ್ಕೆ ದಾನವಾಗಿ ನೀಡಲಾಗಿತ್ತು. ಇದೀಗ ಜಾಗದ ಸಮೀಪದ ರಸ್ತೆಯನ್ನೂ ಕೂಡ ೨೦೧೭ -೧೮ ರಲ್ಲಿ ವಕ್ಫ್ ಖಾತೆಗೆ ಸೇರ್ಪಡೆಗೊಳಿಸಿದ್ದಾರೆ. ಆ ಮೂಲಕ ಇಲಾಖೆ ಎರಡು ಸಮುದಾಯಗಳ ನಡುವೆ ಸಾಮರಸ್ಯವನ್ನು ಕದಡಲು ಯತ್ನಿಸುತ್ತಿದೆ ಎಂದರು. ಇದು ಕಣ್ಣು ತಪ್ಪಿನಿಂದ ಆದ ದೋಷವಲ್ಲ . ಅಧಿಕಾರಿಗಳ ನಿರ್ಲಕ್ಷö್ಯದಿಂದ ಈ ರೀತಿಯ ಸಮಸ್ಯೆ ಉದ್ಭವಿಸುತ್ತಿದೆ. ಉದ್ದೇಶಪೂರ್ವಕವಾಗಿ ಮಾಡಿದ್ದಾಗಿದೆ ಎಂದು ಆರೋಪಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿದ ಅಮೆ ಕುಟುಂಬದ ಸದಸ್ಯರು ಕೂಡಲೇ ದೋಷವನ್ನು ಸರಿಪಡಿಸುವಂತೆ ಒತ್ತಾಯಿಸಿದರು. ದೋಷವನ್ನು ಪರಿಶೀಲಿಸಿ ಸರಿಪಡಿಸುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ಈ ಸಂದರ್ಭ ಭರವಸೆ ನೀಡಿದರು.