ಮಡಿಕೇರಿ, ಜು. ೧೬: ರಾಜಾಸೀಟಿನಲ್ಲಿ ಸುಂದರ ಉದ್ಯಾನವನವನ್ನು ನಿರ್ಮಿಸಿ ಅದರ ಉಸ್ತುವಾರಿ ವಹಿಸಬೇಕಾದ ತೋಟಗಾರಿಕಾ ಇಲಾಖೆ, ಇದೀಗ ಅಲ್ಲಿ ಗ್ಲಾಸ್ ಬ್ರಿಡ್ಜ್ ನಡೆಸಲು ಅನುಮತಿ ನೀಡಿರುವುದಕ್ಕೆ ಮಾಜಿ ಸಚಿವ ಯಂ. ಸಿ. ನಾಣಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ

ಪ್ರಕೃತಿಯ ಸುಂದರ ತಾಣವಾಗಿರುವ ರಾಜಾಸೀಟ್ ಪ್ರವಾಸಿಗರು ಮಾತ್ರವಲ್ಲದೆ ಸ್ಥಳೀಯರಿಗೂ ಕೂಡ ಅತ್ಯಂತ ಪ್ರಿಯವಾದ ತಾಣವಾಗಿದ್ದು, ಹಿರಿಯ ನಾಗರಿಕರೂ ಕೂಡ ಅಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಆಗಮಿಸುತ್ತಾರೆ. ನೂರಾರು ಮಂದಿ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು ರಾಜಾಸೀಟನ್ನು ಅವಲಂಬಿಸಿಕೊAಡಿದ್ದಾರೆ, ಇಂತಹ ಸುಂದರ ಪ್ರದೇಶದಲ್ಲಿ ವಾಣಿಜ್ಯೋದ್ಯಮ ಉದ್ದೇಶದಿಂದ ಗ್ಲಾಸ್ ಬ್ರಿಡ್ಜ್ ನಿರ್ಮಿಸಲು ಅವಕಾಶ ಕೊಟ್ಟಿರುವುದು ಪ್ರಕೃತಿಗೆ ಬಗೆದಿರುವ ಅನ್ಯಾಯ ಎಂದು ನಾಣಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಗೆ ನೀಡಿರುವ ಅನುಮತಿಯನ್ನು ಕೂಡಲೇ ತೋಟಗಾರಿಕಾ ಇಲಾಖೆ ಹಿಂಪಡೆಯಬೇಕು ಹಾಗೂ ಮುಂದೆ ಯಾವುದೇ ವಾಣಿಜ್ಯ ಉದ್ಯಮಕ್ಕೆ ಇಲ್ಲಿ ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ.

ರಾಜಾಸೀಟ್ ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಯಲ್ಲಿದ್ದು, ಆ ಇಲಾಖೆ ಕೂಡ ಯಾವುದೇ ಕಾರಣಕ್ಕೂ ಗ್ಲಾಸ್ ಬ್ರಿಡ್ಜ್ಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯ ಪ್ರಕೃತಿಪ್ರಿಯರು ಹಾಗೂ ಸಂಘ ಸಂಸ್ಥೆಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕೆಂದು ಹೇಳಿದ್ದಾರೆ.

ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಸರಕಾರದ ಮಾರ್ಗಸೂಚಿಯನ್ನು ಕೋರಿರುವ ಜಿಲ್ಲಾಧಿಕಾರಿಗಳ ನಡೆಯನ್ನು ಅವರು ಪ್ರಶಂಸಿಸಿದ್ದು, ರಾಜಾಸೀಟಿನಲ್ಲಿ ಜಿಲ್ಲಾಡಳಿತ ಕೂಡ ಯಾವುದೇ ಕಾರಣಕ್ಕೂ ಈ ಯೋಜನೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.