ಗೋಣಿಕೊಪ್ಪಲು, ಜು.೨೧: ಕಾಡಾನೆ ಹಾವಳಿ ತಡೆಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ದಕ್ಷಿಣ ಕೊಡಗಿನ ವಿವಿಧ ಗ್ರಾಮದ ಗ್ರಾಮಸ್ಥರು ಪೊನ್ನಂಪೇಟೆ ಅರಣ್ಯ ಇಲಾಖೆ ಕಚೇರಿ ಎದುರು ಜಮಾಯಿಸಿ ಬಳಿಕ ಮನವಿ ಸಲ್ಲಿಸಿದರು. ಒಂದು ವಾರದೊಳಗೆ ತೋಟ, ಗ್ರಾಮೀಣ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಕಾಡಿಗಟ್ಟದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿ.ಶೆಟ್ಟಿಗೇರಿ, ಬೇಗೂರು, ಕುಂದ, ಈಚೂರು ಹಾಗು ಹಳ್ಳಿಗಟ್ಟು ಗ್ರಾಮದಲ್ಲಿ ಬರಪೊಳೆ ಪ್ರದೇಶದಿಂದ ಆನೆಗಳು ಆಗಮಿಸುತ್ತಿದ್ದು, ಇವುಗಳಿಂದ ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ. ಫಸಲುಗಳು ನಾಶವಾಗುತ್ತಿವೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಹೋರಾಟ ನೇತೃತ್ವ ವಹಿಸಿದ್ದ ಮಾಚಿಮಾಡ ರವೀಂದ್ರ ಅಧಿಕಾರಿಗಳನ್ನು ಪ್ರಶ್ನಿಸಿದರು.
ಬಿ.ಶೆಟ್ಟಿಗೇರಿ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕ್ಷೇತ್ರದ ಶಾಸಕರು ಭೂಮಿ ಪೂಜೆ ನೆರವೇರಿಸಿ ಹಲವು ಸಮಯಗಳು ಕಳೆದಿವೆ. ಕಾಮಗಾರಿ ಇನ್ನೂ ಆರಂಭವಾಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಗಡುವು ನೀಡಿದ ಅವಧಿಯಲ್ಲಿ ಆನೆಗಳನ್ನು ಓಡಿಸಬೇಕು. ಹೋರಾಟಕ್ಕೆ ಅವಕಾಶ ನೀಡಬಾರದು ಎಂದರು.
ಬೇಗೂರು ಗ್ರಾಮದ ರೈತ ಚೋಡುಮಾಡ ಶ್ಯಾಂ ಪೂಣಚ್ಚ ಮಾತನಾಡಿ, ಮೇಲಧಿಕಾರಿಗಳಿಗೆ ಇಲ್ಲಿಯ ನೈಜ್ಯ ಪರಿಸ್ಥಿತಿಗಳನ್ನು ಹಾಗೂ ಕಾಡಾನೆಯ ಉಪಟಳದ ಗಂಭೀರತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫಲತೆ ಆಗಿರುವುದೇ ಸಮಸ್ಯೆ ಉಲ್ಭಣಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ ಅವರು, ಜನಪ್ರತಿನಿಧಿಗಳಿಗೂ ಒತ್ತಡ ಹಾಕುತ್ತೇವೆ ಎಂದರು.
ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಿರುಗೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಚೆಪ್ಪುಡೀರ ರಾಕೇಶ್ ದೇವಯ್ಯ, ಪೊನ್ನಂಪೇಟೆ ತಾಲೂಕಿನಲ್ಲಿ ಇಲ್ಲಿಯ ತನಕ ಎಷ್ಟು ಬಾರಿ ಕಾಡಾನೆ ಕಾರ್ಯಚರಣೆ ಕೈಗೊಳ್ಳಲಾಗಿದೆ. ಕಾಡಿಗೆ ಹೋಗಿರುವ ಆನೆಗಳೆಷ್ಟು.? ಗ್ರಾಮದಲ್ಲಿ ನೆಲೆಸಿರುವ ಕಾಡಾನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಪ್ರಶ್ನೆಯ ಸುರಿಮಳೆಗೈಯ್ದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಿತಿಮತಿ ವಲಯದ ಎಸಿಎಫ್ ಗೋಪಾಲ್, ಕಳೆದ ೭ ವರ್ಷಗಳಿಂದ ಕಾಡಾನೆಗಳ ಉಪಟಳ ತೀವ್ರಗೊಂಡಿದೆ. ಕಾಡಾನೆಯ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಇಲಾಖೆಯು ಹಂತಹAತವಾಗಿ ಕೈಗೊಳ್ಳುತ್ತಿದೆ. ಈಗಾಗಲೇ ಸರ್ಕಾರದ ವತಿಯಿಂದ ಬಿಡುಗಡೆಯಾಗಿರುವ ರೂ. ೨೧ ಕೋಟಿ ಅನುದಾನದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಕಾಮಗಾರಿ ನಡೆಸುವ ಜವಾಬ್ದಾರಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಪ್ರಸ್ತುತ ನೆಲೆಸಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸವನ್ನು ಆದಷ್ಟು ಬೇಗನೇ ಕೈಗೆತ್ತಿಕೊಳ್ಳುತ್ತೇವೆ. ನನಗೆ ಇರುವ ಮಾಹಿತಿ ಪ್ರಕಾರ ತಿತಿಮತಿ ಹಾಗೂ ನಾಗರಹೊಳೆ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಿ.ಶೆಟ್ಟಿಗೇರಿ ಭಾಗದಲ್ಲಿ ವಿಶೇಷ ಅನುದಾನದಿಂದ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭ ಮತ್ರಂಡ ಪ್ರವೀಣ್ ಕುಶಾಲಪ್ಪ, ಕೇಚೆಟ್ಟಿರ ಅರುಣ್, ನಾಮೇರ ಮೊಣ್ಣಪ್ಪ, ಮುಕ್ಕಾಟೀರ ಪ್ರವೀಣ್ ಸೇರಿದಂತೆ ಹಲವು ರೈತರು, ಬೆಳೆಗಾರರು ಸೇರಿದಂತೆ ಪೊನ್ನಂಪೇಟೆ ವಲಯ ಅಧಿಕಾರಿ ಶಂಕರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.