ಶನಿವಾರಸಂತೆ, ಜು.೨೧ : ರೈತರು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಹೆಚ್ಚು ಆದಾಯಗಳಿಸಬಹುದು ಎಂದು ಕರ್ನಾಟಕ ಆಗ್ರೋ ಕೆಮಿಕಲ್ಸ್ ಮಲ್ಟಿಪ್ಲೆಕ್ಸ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಡಾ.ನಾರಾಯಣ ಸ್ವಾಮಿ ಹೇಳಿದರು.

ಸ್ಥಳೀಯ ಆರ್.ವಿ.ಕಲ್ಯಾಣ ಮಂಟಪದಲ್ಲಿ ಭಾರತೀಯ ಕಾಫಿ ಹವಾಮಾನ ಸ್ಥಿತಿ ಸ್ಥಾಪಕ ಭೂದೃಶ್ಯ ಯೋಜನೆ ಕೊಡಗು ಘಟಕ, ಶನಿವಾರಸಂತೆ ನಮ್ಮ ಬೆಳೆಗಾರರ ಸಂಘ ಹಾಗೂ ಗಣಪತಿ ಫರ್ಟಿಲೈಸರ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕಾಫಿ, ಕಾಳುಮೆಣಸು ಮತ್ತು ಅಡಿಕೆ ಕೃಷಿ ಬಗ್ಗೆ ರೈತರಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅಡಿಕೆ ಹೆಚ್ಚು ಆದಾಯ ತರುವ ಬೇಸಾಯವಾಗಿದೆ. ಈ ಬೇಸಾಯಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅವಲಂಬಿತರಾಗುತ್ತಿದ್ದಾರೆ. ಉತ್ತಮ ಗುಣಮಟ್ಟದ ಅಡಿಕೆ ಫಸಲು ಪಡೆಯಲು ಸೂಕ್ತ ರೀತಿಯಲ್ಲಿ ಬೇಸಾಯ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಅಡಿಕೆಗೆ ಬರುವ ರೋಗ ನಿವಾರಣೆ ಬಗ್ಗೆ ವೈಜ್ಞಾನಿಕವಾಗಿ ತಿಳಿದು ವರ್ಷದ ಫಸಲನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಕಾಫಿ ಬೆಳೆಯಲ್ಲಿ ಗುಣಮಟ್ಟದ ಕಾಫಿಗೆ ಖರೀದಿದಾರರು ಬೆಳೆಗಾರನ ಮನೆ ಬಾಗಿಲಿಗೆ ಬರುವ ಸಾಧ್ಯತೆ ಇದೆ. ರೈತರು ತಮ್ಮ ಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳನ್ನು ನೀಡುವ ಅರಿವನ್ನು ಪಡೆಯಬೇಕು. ರೈತರು ಮಣ್ಣಿನ ಪರೀಕ್ಷೆ ಮಾಡಿಸಿ ಗಿಡಗಳಿಗೆ ಬೇಕಾಗುವ ಪೋಷಕಾಂಶಗಳನ್ನು ಒದಗಿಸುವುದು ಉತ್ತಮ. ರೈತರು ಜೈವಿಕ ಗೊಬ್ಬರಗಳನ್ನು ಬಳಸಿದರೆ ಉತ್ತಮ ಆದಾಯ ಗಳಿಸಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್.ಎಸ್.ಆರ್.ಡಿ.ಪಿ. ಕಾರ್ಯಕ್ರಮ ವ್ಯವಸ್ಥಾಪಕ ಬಿ.ಗಿರೀಶ್, ರೈತರು ತಾವು ಬೆಳೆದ ಬೆಳೆಗಳನ್ನು ಉತ್ಪಾದಕರ ಸಂಸ್ಥೆಯ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಕೃಷಿ ಸಲಕರಣೆಗಳನ್ನು ಖರೀದಿಸಲು ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಹೊಸ ತಂತ್ರಜ್ಞಾನದ ಮೂಲಕ ಸಿಗುವ ಸವಲತ್ತನ್ನು ಯೋಜನೆಯ ಮೂಲಕ ರೈತರಿಗೆ ತಲುಪಿಸಲಾಗುತ್ತಿದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಾಗಾರದಲ್ಲಿ ರೈತರಿಗೆ ಕಾರ್ಮಿಕರ ಕೊರತೆ ನಿವಾರಿಸಲು ಔಷಧಿ ಸಿಂಪಡನೆ ಮಾಡಲು ಡ್ರೋನ್ ತಂತ್ರಜ್ಞಾನದ ಮೂಲಕ ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆ ಮಾಡುವ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಬೆಳೆಗಾರರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ ವಹಿಸಿದ್ದರು. ಉತ್ಪನ್ನಗಳ ವಿತರಕರಾದ ಎಸ್.ಎ.ಆದಿತ್ಯ, ಮೈಸೂರು ಪ್ರಾಂತ್ಯದ ವ್ಯವಸ್ಥಾಪಕ ದ್ಯಾಮಣ್ಣ, ಮುಖಂಡ ಕೊಡ್ಲಿಪೇಟೆ ಭಗವಾನ್ ಗೌಡ ಇತರರು ಉಪಸ್ಥಿತರಿದ್ದರು. ಐಸಿಸಿಆರ್ ಎಲ್‌ನ ಕೊಡಗು ಜಿಲ್ಲಾ ಸಂಯೊಜಕ ರಂಗೇಗೌಡ ಕಾರ್ಯಕ್ರಮ ನಿರ್ವಹಿಸಿದರು. ಶನಿವಾರಸಂತೆ, ಕೊಡ್ಲಿಪೇಟೆ ಹಾಗೂ ಹಾಸನ ಗಡಿಭಾಗದ ಗ್ರಾಮಗಳ ೨೫೦ ಕ್ಕೂ ಅಧಿಕ ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.